ಸಕಲೇಶಪುರ (ಹಾಸನ):ಆಲೂರು ತಾಲೂಕಿನಲ್ಲಿ ಗಾಯಗೊಂಡು ತಿರುಗಾಡುತ್ತಿದ್ದ ಭೀಮ ಎಂಬ ಕಾಡಾನೆ ದಾಳಿಯಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಮೃತಪಟ್ಟ ಘಟನೆ ಇಂದು (ಗುರುವಾರ) ನಡೆದಿದೆ. ವೆಂಕಟೇಶ್ ಮೃತರು. ಇವರು ಅರಿವಳಿಕೆ ತಜ್ಞರು ಕೂಡ ಆಗಿದ್ದರು.
ಕಾಡಾನೆಯೊಂದು ಗಾಯಗೊಂಡು ತಿರುಗಾಡುತಿತ್ತು. ಆಲೂರು ಸಮೀಪದ ಹಳ್ಳಿಯೂರಿನಲ್ಲಿ ಅರಿವಳಿಕೆ ಮದ್ದು ನೀಡಲು ಮುಂದಾದಾಗ ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ದಾಳಿ ಮಾಡಿದೆ. ಆನೆ ತುಳಿತಕ್ಕೆ ವೆಂಕಟೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಹಾಸನದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಘಟನೆಯ ಸಂಪೂರ್ಣ ವಿವರ: ಕಳೆದ ಕೆಲ ದಿನಗಳ ಹಿಂದೆ ಒಂದು ಕಾಡಾನೆ ಮತ್ತೊಂದು ಕಾಡಾನೆಯನ್ನು ಗಾಯಗೊಳಿಸಿತ್ತು. ಗಾಯಗೊಂಡ ಕಾಡಾನೆಗೆ ಚಿಕಿತ್ಸೆ ನೀಡಲು ಅರಣ್ಯ ಇಲಾಖೆ ಸರ್ಕಾರದಿಂದ ಅನುಮತಿ ಪಡೆದಿತ್ತು. ಇಂದು ಸೆರೆ ಹಿಡಿಯಲು ನಿರ್ಧರಿಸಲಾಗಿತ್ತು. ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಅರಣ್ಯಾಧಿಕಾರಿಗಳು ಕಾರ್ಯಾಚರಣೆಗಿಳಿದಿದ್ದರು. ವೆಂಕಟೇಶ್ ಅವರು ಗಾಯಗೊಂಡಿದ್ದ ಕಾಡಾನೆಗೆ ಅರಿವಳಿಕೆ ಮದ್ದು ನೀಡಲು ಮುಂದಾಗಿದ್ದರು. ಆದರೆ, ಇದರಿಂದ ರೊಚ್ಚಿಗೆದ್ದ ಆನೆ ದಿಢೀರ್ ಆಗಿ ವೆಂಕಟೇಶ್ ಮೈಮೇಲೆ ದಾಳಿ ನಡೆಸಿದೆ. ದಾಳಿಯಿಂದ ಪಾರಾಗಲು ಮುಂದಾದರೂ ಬಿಡದ ಆನೆ, ಅಟ್ಟಾಡಿಸಿ ತುಳಿದಿದೆ. ಗಂಭೀರವಾಗಿ ಗಾಯಗೊಂಡ ವೆಂಕಟೇಶ್‌ಗೆ ತಕ್ಷಣವೇ ಪ್ರಥಮ ಚಿಕಿತ್ಸೆಗೆ ಹಾಸನದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ವೆಂಕಟೇಶ್ ಮೃತಪಟ್ಟರು ಎಂದು ಅರಣ್ಯ ಇಲಾಖೆಯ ಮೂಲಗಳು ಖಚಿತಪಡಿಸಿವೆ.