ಹಾಸನ: ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದಿದ್ದ ತಂದೆಗೆ ಹೃದಯಾಘಾತವಾಗಿ, ರಸ್ತೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಮನಕಲಕುವ ಘಟನೆ ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿ ನಡೆದಿದೆ. ಮೃತರನ್ನು ಲಕ್ಷ್ಮಣ (42) ಎಂದು ಗುರುತಿಸಲಾಗಿದೆ. ಎಂದಿನಂತೆ ಜು.17 ರಂದು ಬೆಳಗ್ಗೆ 5.30ರ ಸುಮಾರಿಗೆ ಲಕ್ಷ್ಮಣ ದ್ವಿಚಕ್ರ ವಾಹನದಲ್ಲಿ ತನ್ನ ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದಿದ್ದರು. ಟ್ಯೂಷನ್ ಸೆಂಟರ್ ಮುಂದೆ ಬೈಕ್ ನಿಲ್ಲಿಸಿ, ಮಗಳು ಬೈಕ್‌ನಿಂದ ಇಳಿದು ಟ್ಯೂಷನ್ ಸೆಂಟರ್ ಬಾಗಿಲಿಗೆ ಹೋಗುತ್ತಿದ್ದಂತೆ ಲಕ್ಷ್ಮಣ ಬೈಕ್‌ನಿಂದ ಕುಸಿದು ಬಿದ್ದಿದ್ದರು.
ಅಪ್ಪ ಕುಸಿದು ಬಿದ್ದಿದ್ದನ್ನು ಕಂಡ ಮಗಳು ವಾಪಸ್ ಓಡಿ ಬಂದಿದ್ದಾಳೆ. ಅಪ್ಪನ ಸ್ಥಿತಿ ಕಂಡು ದಿಕ್ಕು ತೋಚದೇ ಮಗಳು ನೋಡುತ್ತಾ ನಿಂತಿದ್ದಾಳೆ. ಈ ವೇಳೆ ವಾಕಿಂಗ್ ಹೋಗುತ್ತಿದ್ದ ಕೆಲವರು ಲಕ್ಷ್ಮಣಗೆ ಆರೈಕೆ ಮಾಡಿ. ನಂತರ ಆಟೋದಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ದುರಾದೃಷ್ಟವಶಾತ್ ಲಕ್ಷ್ಮಣ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಲಕ್ಷ್ಮಣ ಹಾಸನದ ಹೇಮಾವತಿ ನಗರದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಕುಟುಂಬದ ಆಧಾರಸ್ಥಂಭವಾಗಿದ್ದ ಅವರನ್ನು ಕಳೆದುಕೊಂಡ ಕುಟುಂಬ ಈಗ ಸಂಕಷ್ಟಕ್ಕೆ ಸಿಲುಕಿದೆ. ಈ ಘಟನೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.