ಹಾಸನ:ಜಿಲ್ಲೆಯಲ್ಲಿ ಕಲಾವಿದರ ಹಿತರಕ್ಷಣೆಗಾಗಿ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘವನ್ನು ಅಸ್ತಿತ್ವ ಕ್ಕೆ ತರಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ರಾಜಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಾವಿದರ ಹಿತರಕ್ಷಣೆಗಾಗಿ ಜಿಲ್ಲೆಯಲ್ಲಿ ಸಂಘವನ್ನು ಸ್ಥಾಪಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಂಘದ ಮೂಲ ಉದ್ದೇಶ ಕಲಾವಿದರ ಹಿತರಕ್ಷಣೆ. ನೋಂದಣಿಯಾಗುವ ಸದಸ್ಯರಿಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಉದ್ದೇಶ ಹೊಂದಲಾಗಿದೆ ಎಂದರು.
ಕಲಾವಿದರ ಸಂಘದ ರಾಜ್ಯಾಧ್ಯಕ್ಷ ರಾಜಶೇಖರ್ ಕೊರೊನಾ ಸಂದರ್ಭದಲ್ಲಿ ಎಲ್ಲರಂತೆ ಈ ಕಲಾವಿದರೂ ಕೂಡ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಜೀವನ ಮಾಡುವುದೇ ಕಷ್ಟಕರವಾಗಿದೆ. ಇಂತಹ ಕಲಾವಿದರ ಕೈಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ. ಆದರೆ, ಇನ್ನೂ ಕೂಡ ನಮಗೆ ಸ್ಪಂದನೆ ದೊರಕಿಲ್ಲ. ಸಂಘದ ವತಿಯಿಂದ ಈಗಾಗಲೇ ಬಡ ಕುಟುಂಬಗಳಿಗೆ ಸಾಕಷ್ಟು ಸಹಾಯ ಮಾಡುತ್ತಾ ಬರಲಾಗಿದೆ. ಅತ್ಯಂತ ಬಡ ಕುಟುಂಬಗಳನ್ನು ಗುರುತಿಸುವ ಪ್ರಕ್ರಿಯೆ ನಡೆದಿದೆ. ಜನಪ್ರತಿನಿಧಿಗಳ ಸಹಕಾರದಿಂದ ಹೆಚ್ಚಿನ ಸಹಾಯ ಮಾಡುವ ಮೂಲಕ ನೆರವಿಗೆ ಮುಂದೆ ಬರುವಂತೆ ಮನವಿ ಮಾಡಿದರು.
ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘವಲ್ಲಿ ರಾಜ್ಯಾದ್ಯಂತ 12,500 ಕಲಾವಿದರು ಸದಸ್ಯರಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ 600 ಜನ ಕಲಾವಿದರು ನೋಂದಾಯಿಸಿಕೊಂಡಿರುವುದಾಗಿ ಹೇಳಿದರು.