ಹಾಸನ:ಜನರ ಬೇಡಿಕೆಯಂತೆ ಸರ್ಕಾರವು ಮತಾಂತರ ಮತ್ತು ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲಾಗಿದ್ದರೂ ಮತ್ತೆ ಮರುಕಳಿಸುತ್ತಿವೆ. ಜಾರಿಗೆ ತರಲಾಗಿರುವ ಕಾನೂನುಗಳನ್ನು ಸರ್ಕಾರವು ವಿಶೇಷ ಗಮನಹರಿಸಿ ಇನ್ನಷ್ಟು ಕಠಿಣ ಕ್ರಮಕ್ಕೆ ಮುಂದಾಗಬೇಕೆಂದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಒತ್ತಾಯಿಸಿದರು.
ನಗರದದಲ್ಲಿರುವ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರಗಳು ಕಾಲಕಾಲಕ್ಕೆ ಜನರ ಬೇಡಿಕೆಗಳಿಗೆ ಅನುಗುಣವಾಗಿ ಸಮಾಜದ ಸ್ಥಿತಿಗತಿಗಳ ಪೂರಕವಾಗಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿವೆ. ಆದರೆ ಕೊನೆಗೆ ಕಣ್ಣೊರೆಸುವ ತಂತ್ರ ಆಗುತ್ತಿದೆ. ಕಾನೂನನ್ನು ಯಥಾವತ್ತಾಗಿ ಪರಿಪೂರ್ಣವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದಿದ್ದಾರೆ.
ಕಾನೂನು ಇನ್ನಷ್ಟೂ ಕಠಿಣ ಆಗಬೇಕು:ಪ್ರಸ್ತುತದಲ್ಲಿ ಮತಾಂತರದ ವಿರುದ್ಧ ಕಾನೂನುಗಳನ್ನು ಜಾರಿಗೊಳಿಸಿದ್ದರೂ ಅಲ್ಲಲ್ಲಿ ಇನ್ನೂ ಕೂಡ ಮತಾಂತರ ಪ್ರಕರಣಗಳು ನಡೆಯುವುದನ್ನು ಕಾಣುತ್ತಿದ್ದೇವೆ. ಇದರಿಂದ ಕುಟುಂಬಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದ್ದು, ವೈಮನಸ್ಸು ಮತ್ತು ಪ್ರಾಣ ಹಾನಿಯಾಗುತ್ತಿದೆ. ಹಾಗಾಗಿ ಜಾರಿಗೆ ತರಲಾಗಿರುವ ಕಾನೂನನ್ನು ಇನ್ನಷ್ಟು ಗಟ್ಟಿಗೊಳಿಸುವತ್ತ, ವಿಶೇಷವಾದ ಪ್ರಯತ್ನ ಮಾಡಬೇಕೆಂದು ಶ್ರೀಗಳು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.