ಸಕಲೇಶಪುರ:ತಾಲೂಕಿನ ಕಸಬಾ ಹೋಬಳಿ ಜನ್ನಾಪುರ ಗ್ರಾಮದ ಸಮೀಪ ಕಾಡಾನೆಗಳ ಹಿಂಡೊಂದು ಅಪಾರ ಪ್ರಮಾಣದ ಬೆಳೆ ನಾಶ ಮಾಡಿದ್ದು, ಗ್ರಾಮದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣಕ್ಕೆ ಸಮೀಪವಿರುವ ಜನ್ನಾಪುರ ಸಮೀಪ ಕಾಡಾನೆಗಳು ಸಂಚರಿಸಿ ಗ್ರಾಮದ ಶಂಕರಪ್ಪ, ದಿನೇಶ್, ನಂದೀಶ ಎಂಬುವರ ತೋಟಗಳಲ್ಲಿ ಅಪಾರ ಪ್ರಮಾಣದ ಕಾಫಿ, ಮೆಣಸು, ಅಡಿಕೆ, ಬಾಳೆ ಬೆಳೆಗಳನ್ನು ನಾಶ ಮಾಡಿವೆ.
ಇದರಿಂದಾಗಿ ಕಾಫಿ ತೋಟದ ಮಾಲೀಕರು ಪರದಾಡುವಂತಾಗಿದೆ. ತಾಲೂಕಿನಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ದಿನನಿತ್ಯ ಒಂದಲ್ಲ ಒಂದು ಗ್ರಾಮದಲ್ಲಿ ಕಾಡಾನೆಗಳು ದಾಂಧಲೆ ನಡೆಸುತ್ತಿವೆ.
ಕಾಡಾನೆಗಳ ದಾಳಿಯಿಂದ ರೈತರು ಹಾಗೂ ಕೂಲಿ ಕಾರ್ಮಿಕರು ಸದಾ ಆತಂಕದಲ್ಲೇ ಕೆಲಸ ಮಾಡಬೇಕಿದೆ. ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಹಲವು ಪ್ರತಿಭಟನೆಗಳು ನಡೆದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಕಾಡಾನೆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.