ಹಾಸನ: ಜಿಲ್ಲೆಗೆ ದಾಖಲಾತಿ ನಾಶ ಮಾಡುವ ವಿಶೇಷ ಭೂ - ಸ್ವಾಧೀನ ಅಧಿಕಾರಿ ಬಂದಿದ್ದು, ಕೂಡಲೇ ಜಿಲ್ಲಾಧಿಕಾರಿ ಪರಿಶೀಲಿಸುವಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮನವಿ ಮಾಡಿದ್ದಾರೆ.
ನಗರದ ಸಂಸದರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ವಿಶೇಷ ಭೂ ಸ್ವಾಧೀನ ಕಚೇರಿಯಲ್ಲಿ ಈ ಹಿಂದೆ ಹೇಮಾವತಿ ಜಲಾಶಯ ಯೋಜನೆ ನಿರಾಶ್ರಿತರಿಗೆ ಮತ್ತು ಸಂತ್ರಸ್ತರಿಗೆ ನೀಡಲಾಗುವ ಭೂಮಿ ಹಂಚಿಕೆಯಲ್ಲಿ ಅಕ್ರಮವಾಗಿದೆ. ಸುಮಾರು 8 ಸಾವಿರ ಎಕರೆ ಜಮೀನು ಹಂಚಲಾಗಿದೆ ಎಂದರು.
ತಹಶೀಲ್ದಾರ್ ದಾಖಲೆಗಳನ್ನು ತಿದ್ದುಪಡಿ ಮತ್ತು ನಾಶ ಮಾಡುವುದರಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಈ ಹಿಂದೆ ಹಾಸನ ತಹಶೀಲ್ದಾರ್ ಆಗಿದ್ದಾಗ ಹಲವು ಅಕ್ರಮ ನಡೆಸಿದ್ದಾರೆ. ಈಗ ಹೇಮಾವತಿ ಜಲಾಶಯ ಯೋಜನೆ ಅಕ್ರಮ ನಡೆದಿರುವ ದಾಖಲೆಗಳನ್ನು ನಾಶ ಮಾಡುವ ಸನ್ನಿವೇಶ ಇದ್ದು, ಕೂಡಲೇ ಸಾರ್ವಜನಿಕ ಲೆಕ್ಕಪತ್ರಗಳ ಸುರಕ್ಷತೆಗಾಗಿ ಸಮಿತಿ ತೀರ್ಮಾನ ಮಾಡಿ ಆ ಎಲ್ಲ ದಾಖಲೆಗಳನ್ನು ಜಿಲ್ಲಾಧಿಕಾರಿ ತಮ್ಮ ವಶದಲ್ಲಿಟ್ಟುಕೊಳ್ಳಬೇಕು. ಭ್ರಷ್ಟ ಅಧಿಕಾರಿಗಳನ್ನು ಹಾಸನಕ್ಕೆ ನೇಮಕ ಮಾಡಿದ್ದು, ಹಣ ನೀಡಿ ಇಲ್ಲಿಗೆ ಬಂದಿದ್ದೇನೆ ಎಂದು ರೇವಣ್ಣನವರು ಕೆಂಡಾಮಂಡಲರಾದರು.
ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸುದ್ದಿಗೋಷ್ಠಿ ಇದನ್ನು ಓದಿ:ಕೊರೊನಾ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಸಲಹೆ ಏನು?
ಈಗಾಗಲೇ ನಾನು ಜಿಲ್ಲಾಧಿಕಾರಿಗಳಿಗೆ ದಾಖಲೆಗಳನ್ನು ತಮ್ಮ ವಶಕ್ಕೆ ಪಡೆಯುವಂತೆ ದೂರವಾಣಿ ಮುಖಾಂತರ ಸೂಚನೆ ನೀಡಿದ್ದೇನೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯಲಾಗುವುದು. ಕಳ್ಳ ಅಧಿಕಾರಿಯನ್ನು ಹಾಸನಕ್ಕೆ ವರ್ಗಾವಣೆ ಮಾಡಿರುವ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಮತ್ತು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೂಡಲೇ ಕೇಂದ್ರ ಸರ್ಕಾರವೂ ರೈತರ ಜೊತೆ ಸಭೆ ನಡೆಸಿ ಮೂರು ಮಸೂದೆ ಹಿಂಪಡೆಯಬೇಕು. ಈ ಮಸೂದೆ ರೈತರಿಗೆ ಧಕ್ಕೆ ತರುವ ಮಸೂದೆಗಳಾಗಿವೆ. ರೈತರು ಬೆಳೆದ ಬೆಳೆಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು. ರೈತರ ಬಗ್ಗೆ ಯಾರೂ ಹಗುರವಾಗಿ ಮಾತನಾಡಬಾರದು. ರೈತರು ದೇಶಕ್ಕೆ ಅನ್ನ ಕೊಡುತ್ತಾರೆ. ಆದರೆ, ಮಂತ್ರಿಗಳು ಇಂದು ಹೋಗುತ್ತಾರೆ ಇರುತ್ತಾರೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿಕೆಯನ್ನು ಕಟುವಾಗಿ ಖಂಡಿಸುತ್ತೇನೆ. ಯಾವುದೇ ದೊಡ್ಡಸ್ತಿಕೆ ತೊರದೇ ರೈತರ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.