ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ: ಎಚ್.ಡಿ ದೇವೇಗೌಡ ಹಾಸನ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ ಶ್ರೀರಾಮದೇವರಕಟ್ಟೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಹೇಳಿಕೆ ನೀಡಿದ್ದಾರೆ.
2019ರಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಲೋಕಸಭೆ ಅಭ್ಯರ್ಥಿಯಾಗಿ ಶಾಸಕರು, ಮಾಜಿ ಶಾಸಕರು ಎಲ್ಲರೂ ತೀರ್ಮಾನ ಮಾಡಿದ್ದರು. ಅವರು ಒಂದು ಲಕ್ಷ ಲೀಡ್‌ನಲ್ಲಿ ಗೆದ್ದಿದ್ದಾರೆ. ಈಗ ಕಾಂಗ್ರೆಸ್, ಜೆಡಿಎಸ್‌ನಲ್ಲೂ ಒಬ್ಬರೇ ಲೋಕಸಭಾ ಸದಸ್ಯರಿದ್ದಾರೆ. ಕಾಂಗ್ರೆಸ್ ವಿರುದ್ಧವಾಗಿ ಬಿಜೆಪಿ - ಜೆಡಿಎಸ್ ಒಂದಾಗಿ ಲೋಕಸಭಾ ಚುನಾವಣೆ ಎದುರಿಸಲು ತೀರ್ಮಾನ ಮಾಡಿದ್ದೇವೆ. ಪ್ರಜ್ವಲ್ ಸಿಟ್ಟಿಂಗ್ ಮೆಂಬರ್ ಇದ್ದಾರೆ ಹಾಗೂ ಯುವಕರಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಚರ್ಚೆ ಮಾಡುತ್ತಾರೆ ಎಂದರು.
ಹಾಸನ ಅಭ್ಯರ್ಥಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ, ಒಬ್ಬರೇ ಸಿಟ್ಟಿಂಗ್ ಎಂಪಿ ಇರೋದು, ಬೇರೆ ಯಾವ್ಯಾವ ಸೀಟ್ ಬಿಟ್ಟು ಕೊಡ್ತಾರೆ ನೋಡೋಣ. ಅಧಿಕೃತವಾಗಿ ಪ್ರಜ್ವಲ್ ರೇವಣ್ಣ ಅವರನ್ನು ಹಾಸನ ಲೋಕಸಭಾ ಅಭ್ಯರ್ಥಿ ಎಂದು ಎಚ್.ಡಿ.ದೇವೇಗೌಡ ಇದೇ ವೇಳೆ ಘೋಷಿಸಿದರು.
ಅಮಿತ್ ಶಾ, ಕುಮಾರಸ್ವಾಮಿ ಮೊದಲ ಹಂತದಲ್ಲಿ ಮಾತನಾಡಿದ್ದಾರೆ. ಸ್ಥಳೀಯವಾಗಿ ವಿಜಯೇಂದ್ರ, ಅಶೋಕ್, ಯಡಿಯೂರಪ್ಪ ಅವರು ಇದ್ದಾರೆ ಅವರ ಜೊತೆ ಕುಮಾರಸ್ವಾಮಿ ಸಮಾಲೋಚನೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಈ ಬಾರಿ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ, ಸುಮ್ಮನೆ ಗೊಂದಲ ಬೇಡ. ಇನ್ನೂ ಎರಡು ವರ್ಷ ರಾಜ್ಯಸಭೆ ಸದಸ್ಯತ್ವದ ಅವಧಿ ಇದೆ ಎಂದು ಇದೇ ವೇಳೆ ಸ್ಪಷ್ಟನೆಯನ್ನೂ ಕೊಟ್ಟರು.
ಪಂಚ ರಾಜ್ಯ ಚುನಾವಣೆಯ ಎಕ್ಸಿಟ್ಪೋಲ್ ರಿಪೋರ್ಟ್ ಬಗ್ಗೆ ಮಾತನಾಡಿ, ಒಂದೆರಡು ಕಡೆ ಕಾಂಗ್ರೆಸ್ ಒಂದೆರಡು ಕಡೆ ಬಿಜೆಪಿ ಬರುವ ಸಮೀಕ್ಷೆ ನೀಡಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಐದು ಕಡೆ ಗೆದ್ದಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ಹಾಗಾಗಿ ವಿಧಾನಸಭಾ ಚುನಾವಣೆ ಫಲಿತಾಂಶ ಲೋಕಸಭೆ ಮೇಲೆ ಪರಿಣಾಮ ಬೀರುವುದಿಲ್ಲ. ಇದು ನನ್ನ ರಾಜಕೀಯ ಅನುಭವದಿಂದ ಹೇಳುತ್ತಿದ್ದೇನೆ. ಸದ್ಯ 14,15 ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ. ನಾಲ್ಕೈದು ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಮಾಡುತ್ತಿದೆ ಎಂದರು.
ಕರ್ನಾಕದಲ್ಲೂ ಚುನಾವಣೆಯ ಕೊನೆ ಕ್ಷಣದಲ್ಲಿ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಈಗ ದೇಶದಲ್ಲಿ ಎಲ್ಲ ಕಡೆ ಗ್ಯಾರಂಟಿ ಶುರುವಾಗಿದೆ. ಗ್ಯಾರಂಟಿ ಬಗ್ಗೆ ಈಗ ಹೆಚ್ಚು ಮಾತನಾಡೋದಿಲ್ಲ ಎಂದರು. ನಾನು ಇಂದು ಸಭೆ ನಡೆಸುತ್ತಿರೋ ಬಗ್ಗೆ ಚರ್ಚೆ ಆಗಿದೆ. ಬಿ.ವೈ ವಿಜಯೇಂದ್ರ ಮತ್ತು ಆರ್.ಅಶೋಕ್ ನಮ್ಮ ಮನೆಗೆ ಬಂದಿದ್ದರು. ಈ ಚುನಾವಣೆಯನ್ನು ಸವಾಲಾಗಿ ತೆಗೆದುಕೊಳ್ಳಿ, ನಾನು ನಿಮ್ಮ ಹಿಂದೆ ಇರ್ತೇನೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ನಾನು ಮತ್ತೆ ಬಿಜೆಪಿಗೆ ಸೇರ್ಪಡೆಯಾಗಲಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ: ಜಗದೀಶ ಶೆಟ್ಟರ್