ಹಾಸನ :ತನ್ನ ಅನೈತಿಕ ಸಂಬಂಧಕ್ಕೆ ಎರವಾದ ಎಂದು ಮತ್ತು ಹಣದ ವಿಚಾರಕ್ಕಾಗಿ ಮಗಳೇ ಸುಪಾರಿ ಕೊಟ್ಟು ಅಪ್ಪನನ್ನು ಕೊಲೆ ಮಾಡಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾರು ಚಾಲಕ ಮುನಿರಾಜು(48) ತನ್ನ ಸ್ವಂತ ಮಗಳಿಂದಲೇ ಕೊಲೆಯಾದ ನತದೃಷ್ಟ ಅಪ್ಪ. ವಿದ್ಯಾ ಕೊಲೆ ಮಾಡಿದ ಪಾಪಿ ಮಗಳು. ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದ ಈತನ ಮಗಳು ವಿದ್ಯಾ ಇನ್ನೊಂದು ಮದುವೆಯಾಗಿದ್ದಳು, ಅದೂ ಸಾಲದೆಂಬಂತೆ , ಚಿದಾನಂದ ಎಂಬಾತನೊಂದಿಗೆ ಅನೈತಿಕ ಸಂಬಂಧವನ್ನಿಟ್ಟುಕೊಂಡಿದ್ದಳು ಎನ್ನಲಾಗಿದೆ.
ಈ ವಿಚಾರ ತಂದೆ ಮುನಿರಾಜುವಿಗೆ ಗೊತ್ತಾಗಿತ್ತು. ಹೀಗಾಗಿ ತಂದೆ, ಮಗಳಿಗೆ ನಡತೆಗೆಟ್ಟ ಕೆಲಸಕ್ಕೆ ಕೈ ಹಾಕಬೇಡ. ಮನೆಯ ಮಾನ ಹೋಗುತ್ತೆ. ಈ ಅಳಿಯನೊಂದಿಗಾದರೂ ಚೆನ್ನಾಗಿ ಸಂಸಾರ ಮಾಡಿಕೊಂಡು ಇರು ಎಂದು ಹೇಳಿದರೆನ್ನಲಾಗಿದೆ. ಈ ಬಗ್ಗೆ ಸಂಬಂಧಿಕರ ಸಮ್ಮುಖದಲ್ಲಿಯೇ ನ್ಯಾಯ ಪಂಚಾಯ್ತಿ ಕೂಡಾ ನಡೆದಿದ್ದು, ಯಾರ ಮಾತು ಕೇಳದ ವಿದ್ಯಾ ತನ್ನ ಹಳೇ ಚಾಳಿ ಮುಂದುವರೆಸಿದ್ದಳು.
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ತಂದೆಗೆ ಮುಹೂರ್ತವಿಟ್ಟ ಮಗಳು ಹಣವೇ ಎಲ್ಲದ್ದಕ್ಕೂ ಕಾರಣವಾಯ್ತು
ಈ ಮಧ್ಯೆ 2018ರಲ್ಲಿ ವಿದ್ಯಾಗೆ ಅಪಘಾತವಾಗಿದ್ದು, ಪ್ರಕರಣ ನ್ಯಾಯಾಲಯದಲ್ಲಿತ್ತು. ಬಳಿಕ ಈ ವರ್ಷ ಸುಮಾರು 7 ಲಕ್ಷ ಪರಿಹಾರವಾಗಿ ಹಣವೂ ಬಂದಿತ್ತು. ಇದರ ಜೊತೆಗೆ ಮೊದಲ ಗಂಡನಿಂದ ವಿಚ್ಛೇದನದ ಪರಿಹಾರ ಹಣವೂ ಬಂದಿದ್ದು, ಎಲ್ಲ ಸೇರಿ ಸುಮಾರು 20 ಲಕ್ಷಕ್ಕೂ ಅಧಿಕ ಹಣ ವಿದ್ಯಾ ಬಳಿ ಇತ್ತು. ಈ ಸಂದರ್ಭದಲ್ಲಿ ತಂದೆ ತನಗೂ ಸ್ವಲ್ಪ ಹಣ ನೀಡುವಂತೆ ಆಕೆಯನ್ನು ಕೇಳಿದ್ದಾರೆ. ಆದರೆ ಅದಕ್ಕೆ ಒಪ್ಪದ ಆಕೆ ಹಣ ಕೇಳಿದ ತಂದೆಗೆ ಮುಹೂರ್ತವಿಟ್ಟಿದ್ದಾಳೆ.
ತಂದೆಯ ಹತ್ಯೆಗೆ ಮುಹೂರ್ತ ಫಿಕ್ಸ್ ಮಾಡಿದ ಮಗಳು
ಇತ್ತ ತಂದೆಗೆ ಹಣ ನೀಡಲು ಒಪ್ಪದ ಮಗಳು ಆತನನ್ನು ಮುಗಿಸಲು ನೀಡಿದ ಹಣ ಬರೋಬರಿ 15 ಲಕ್ಷ. ಹೌದು ತಂದೆಗೆ ಬಿಡಿಗಾಸು ಕೊಡಲು ಒಪ್ಪದ ಮಗಳು ಆತನ ಹತ್ಯೆ ಮಾಡುವಂತೆ ತನ್ನ ಗೆಳೆಯ ಚಿದಾನಂದ್ ಹಾಗೂ ಆತನ ಗೆಳೆಯ ರಘುವಿಗೆ 15 ಲಕ್ಷದ ಆಫರ್ ನೀಡಿದ್ದಾಳೆ. ಬಳಿಕ ಚಿದಾನಂದ ಹಾಗೂ ರಘು ಸೇರಿ ಕಾರು ಚಾಲಕನೂ ಆಗಿರುವ ವಿದ್ಯಾಳ ತಂದೆ ಮುನಿರಾಜುವಿಗೆ ಕರೆ ಮಾಡಿದ್ದಾರೆ. ತಮ್ಮವರೊಬ್ಬರನ್ನು ಹಾಸನದಿಂದ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಬೇಕು. ನೀವು ಚಾಲಕರಾಗಿ ಬನ್ನಿ ಎಂದು ನಂಬಿಸಿದ್ದಾರೆ. ಇವರ ಮಾತು ನಂಬಿ ಬಂದ ಮುನಿರಾಜುವನ್ನು ಆತನ ಕಾರಿನಲ್ಲಿಯೇ ಹಾಸನದ ಆಲೂರಿನ ಮಣಿಗನಹಳ್ಳಿ ಬಳಿ ಮರ್ಡರ್ ಮಾಡಿ ಮೃತದೇಹವನ್ನು ಹೇಮಾವತಿ ಹಿನ್ನೀರಿಗೆ ಎಸೆದು ಹೋಗಿದ್ದಾರೆ.
ಬಳಿಕ ಹಿನ್ನೀರಿನಲ್ಲಿ ಮೃತದೇಹ ನೋಡಿದ ಸ್ಥಳೀಯರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಆ ಸಂದರ್ಭದಲ್ಲಿ ಮೃತನ ಸುಳಿವು ಸಿಗದ ಕಾರಣ ಮೃತನ ಭಾವಚಿತ್ರವನ್ನು ಎಲ್ಲಾ ಪೊಲೀಸ್ ಠಾಣೆಗಳಿಗೂ ರವಾನಿಸಿ ಪತ್ತೆಹಚ್ಚುವ ಕಾರ್ಯದಲ್ಲಿದ್ದರು. ಈ ವೇಳೆ ಹಾಸನದ ಹಿರೀಸಾವೆ ಪೊಲೀಸ್ ಠಾಣೆಗೆ ಬಂದ ಮಗಳು ವಿದ್ಯಾ ತಂದೆ ಕಾಣೆಯಾದ ಬಗ್ಗೆ ದೂರು ನೀಡಿದ್ದಾಳೆ. ಈ ವೇಳೆ ಆಲೂರು ಠಾಣಾ ವ್ಯಾಪ್ತಿಯಲ್ಲಿ ಸಿಕ್ಕ ಅನಾಮಧೇಯ ಮೃತ ವ್ಯಕ್ತಿಯ ಪೋಟೋವನ್ನ ತೋರಿಸಿದಾಗ ನನಗೇನು ಗೊತ್ತಿಲ್ಲವೆಂದು ನಾಟಕವಾಗಿ ಇವರು ನಮ್ಮ ತಂದೆ ಎಂದು ಕಣ್ಣಿರಿಡುತ್ತಾಳೆ ವಿದ್ಯಾ. ವಿಚಾರಣೆ ಕೈಗೊಂಡ ಪೊಲೀಸರು ಮೊಬೈಲ್ ಆಧಾರದ ಮೇಲೆ ಆರೋಪಿ ಚಿದಾನಂದನನ್ನು ವಶಕ್ಕೆ ಪಡೆದು ಪೊಲೀಸ್ ಭಾಷೆಯಲ್ಲಿಯೇ ಬಾಯ್ಬಿಡಿಸಿದಾಗ ಮಗಳು ವಿದ್ಯಾಳೇ ಕೊಲೆ ಆರೋಪಿ ಎಂಬುದು ಬಯಲಾಗಿದೆ.
ನಂತರ ಕೊಲೆಯಾದ ಮುನಿರಾಜು ಮಗಳು ವಿದ್ಯಾ (23), ಆಕೆಯ ಪ್ರಿಯಕರ ಮತ್ತು ಕಾರು ಚಾಲಕ ಚಿದಾನಂದ್ (25) ಮತ್ತು ರಘು (24) ಎಂಬುವರನ್ನ ವಶಕ್ಕೆ ಪಡೆದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.