ಹಾಸನ : ಮನೆಯ ಭೋಗ್ಯಕ್ಕಿದ್ದ (ಬಾಡಿಗೆದಾರ) ಮಹಿಳೆಯ ಕಿರುಕುಳ ತಾಳಲಾರದೇ ಮನನೊಂದು ಮನೆಯ ಮಾಲೀಕ ಆತ್ಮಹತ್ಯೆ ಮಾಡಿಕೊಂಡರೆ, ಈಕೆಯ ತಾಯಿ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ನಗರದ ದಾಸರಕೊಪ್ಪಲಿಯಲ್ಲಿ ನಡೆದಿದೆ.
ಮನೆಯಲ್ಲಿ ಭೋಗ್ಯಕ್ಕಿದ್ದ ಮಹಿಳೆ ನಿತ್ಯ ಮನೆ ಮಾಲೀಕರಿಗೆ ಕಿರುಕುಳ ನೀಡಿದ್ದಲ್ಲದೇ ಹಲ್ಲೆ ಮಾಡಲು ಕೂಡ ಮುಂದಾಗಿದ್ದರಂತೆ. ಇದರಿಂದ ಮನನೊಂದ ಲಲಿತಮ್ಮ (55) ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತಿ ನಾಗರಾಜ್ ಆರೋಪಿಸಿದ್ದಾರೆ. ಇನ್ನು ಮಗಳು ಮೃತಪಟ್ಟ ವಿಚಾರ ಕೇಳಿದ ಮೃತ ಲಲಿತಮ್ಮ ಅವರ ತಾಯಿ ಲಕ್ಷ್ಮಮ್ಮ(74) ಎಂಬುವರಿಗೆ ಹೃದಯಾಘಾತವಾಗಿದ್ದು, ಕಳೆದ ರಾತ್ರಿ ಸಾವನಪ್ಪಿದ್ದಾರೆ. ಯಾರೋ ಮಾಡಿದ ತಪ್ಪಿಗೆ ತಾಯಿ - ಮಗಳು ಜೀವ ಕಳೆದುಕೊಂಡಂತಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವಎಸ್ ಪಿ ಹರಿರಾಮ್ ಶಂಕರ್, "ದಾಸರಕೊಪ್ಪಲು ತಿರುಮಲ ಕಲ್ಯಾಣ ಮಂಟಪದ ಮುಂಭಾಗ ಲಲಿತಮ್ಮ ಹಾಗೂ ಪತಿ ನಾಗರಾಜು ವಾಸವಾಗಿರುವುದರ ಜೊತೆಗೆ ಬಾಡಿಗೆ, ಭೋಗ್ಯಕ್ಕಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಕೆಳಭಾಗದ ನೆಲ ಮಹಡಿಯಲ್ಲಿ ಲಲಿತಾ ದಂಪತಿ ಹಾಗೂ ಇತರರು ವಾಸವಾಗಿದ್ದರು. ಮೇಲ್ಭಾಗದ ಮನೆಗಳನ್ನು ಬಾಡಿಗೆಗೆ ನೀಡಿದ್ದರು. ಈ ಪೈಕಿ ಎರಡು ವರ್ಷದ ಹಿಂದೆ ಮೊದಲ ಮಹಡಿಯ ಉತ್ತರ ಭಾಗದ ಮನೆಯನ್ನು ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ - ನಟರಾಜ ದಂಪತಿಗೆ 5 ಲಕ್ಷ ರೂ. ಹಣ ಪಡೆದು ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ನೀಡಲಾಗಿತ್ತು. ಭೋಗ್ಯಕ್ಕೆ ಬಂದ ಒಂದು ವರ್ಷದ ನಂತರ ಸುಧಾರಣಿ ನಟರಾಜ ದಂಪತಿ ವಿನಾಕಾರಣ ಲಲಿತಾ ಅವರೊಂದಿಗೆ ಜಗಳ ತೆಗೆಯುತ್ತಿದ್ದರು. ಜೂ.16 ರಂದು ಚಿನ್ನದ ಸರ ಕದ್ದಿದ್ದೀಯಾ, ಕಳ್ಳಿ ಎಂದು ಜಗಳ ತೆಗೆದು ಲಲಿತಾಗೆ ಬಾಯಿಗೆ ಬಂದಂತೆ ಸುಧಾರಾಣಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ" ಎಂದು ಮಾಹಿತಿ ನೀಡಿದರು.