ಅರಕಲಗೂಡು: ವಿಕಲಚೇತನ ಹೆಂಡತಿ ಲಕ್ಷ್ಮಿ ಹಾಗೂ ಅನಾರೋಗ್ಯ ಪೀಡಿತ ಮಂಜುನಾಥ ದಂಪತಿ ಪಟ್ಟಣದ ಕುಂಬಾರ ಬೀದಿಯಲ್ಲಿ ಕಳೆದ 30 ವರ್ಷಗಳಿಂದ ವಾಸವಿದ್ದಾರೆ. ಆದರೆ ಈಗ ಇವರು ವಾಸಿಸುತ್ತಿರುವ ಮನೆ ಶಿಥಿಲಾವಸ್ಥೆ ತಲುಪಿರುವುದರಿಂದ ಈ ದಂಪತಿ ದಿಕ್ಕು ತೋಚದಂತಾಗಿದ್ದಾರೆ.
ಶಿಥಿಲಾವಸ್ಥೆಯಲ್ಲಿರುವ ವಾಸಿಸುತ್ತಿರುವ ದಂಪತಿ ಲಕ್ಷ್ಮಿಗೆ ಕಿವಿ ಕೇಳುವುದಿಲ್ಲ. ಕೆಲವರ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪತಿಗೆ ಆರೋಗ್ಯ ಸ್ಥಿತಿ ಸರಿ ಇಲ್ಲ. ಇಂತಹ ಸಂದರ್ಭದಲ್ಲಿ ಆಸರೆಯಾಗಿದ್ದ ಮನೆ ಸಹ ಮಳೆಗಾಲದಲ್ಲಿ ಸ್ವಲ್ಪ ಸ್ವಲ್ಪ ಭಾಗ ಬೀಳುತ್ತಿದ್ದು, ಮನೆಯ ಸುತ್ತಲೂ ಪ್ಲಾಸ್ಟಿಕ್ ಟಾರ್ಪಾಲ್ ಕಟ್ಟಿಕೊಂಡು ವಾಸಿಸುತ್ತಿದ್ದಾರೆ.
ಹಳೆ ಮನೆ ರಿಪೇರಿಗೆಂದು ಪಟ್ಟಣ ಪಂಚಾಯತ್ಗೆ ಅರ್ಜಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಕಡು ಬಡವರಿಗೆ ಸಿಗುವ ಸರ್ಕಾರದ ಸವಲತ್ತುಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೀಡುತ್ತಿಲ್ಲ. ಬಿದ್ದು ಹೋಗುತ್ತಿರುವ ಸೂರಿನ ಕೆಳಗೆ ದಿನನಿತ್ಯ ಪ್ರಾಣ ಭಯದಲ್ಲೇ ಜೀವನ ಸಾಗಿಸುತ್ತಿದ್ದೀವೆ ಎಂದು ಮಂಜುನಾಥ ದಂಪತಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಪಟ್ಟಣ ಪಂಚಾಯತ್ ಕಾರ್ಯಾಲಯಕ್ಕೆ ಸರ್ಕಾರದ ಯಾವುದಾದರೂ ಒಂದು ಅನುದಾನದಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲವಂತೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಇವರ ಕಷ್ಟಕ್ಕೆ ಸ್ಪಂದಿಸಬೇಕಿದೆ.