ಸಕಲೇಶಪುರ(ಹಾಸನ):ಕೊರೊನಾದಿಂದಾಗಿ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತ್ತಿದೆ. ಮಲೆನಾಡಿನಲ್ಲಿ ಪ್ರಮುಖ ಬೆಳೆ ಕಾಫಿ, ಏಲಕ್ಕಿ, ಮೆಣಸು ಹಾಗೂ ಭತ್ತದ ಬೆಳೆಗಳಾಗಿದ್ದು ಇತ್ತೀಚೆಗೆ ಕೆಲವು ಭಾಗಗಳಲ್ಲಿ ಮೆಣಸಿನಕಾಯಿ, ಬೀನ್ಸ್ ಎಂಬಂತಹ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಬಹುತೇಕ ಬೆಳೆಗಳನ್ನು ವರ್ಷದಲ್ಲಿ ಒಮ್ಮೆ ಮಾತ್ರ ಬೆಳೆಯಲಾಗುತ್ತದೆ.
ಕಾಫಿ ಫಸಲು ಸಾಮಾನ್ಯವಾಗಿ ಡಿಸೆಂಬರ್, ಜನವರಿಯಲ್ಲಿ ಬಂದರೆ, ಮೆಣಸು ಸಾಮಾನ್ಯವಾಗಿ ಫೆಬ್ರವರಿ ಮಾಹೆಯಲ್ಲಿ ಬರುತ್ತದೆ. ಮೂಡಸೀಮೆಗಳಲ್ಲಿ ಭತ್ತವನ್ನು ಸುಮಾರು 3 ಬಾರಿ ಬಿತ್ತನೆ ಮಾಡಿದರೆ ತಾಲೂಕಿನಲ್ಲಿ ಭತ್ತವನ್ನು ಒಮ್ಮೆ ಮಾತ್ರ ಬಿತ್ತನೆ ಮಾಡಿ ಉಳಿದ ಸಮಯದಲ್ಲಿ ಕೆಲವರು ಭೂಮಿಯನ್ನ ಹಾಗೆಯೆ ಬಿಟ್ಟರೆ ಇನ್ನೂ ಕೆಲವರು ಇತ್ತೀಚೆಗೆ ತರಕಾರಿಯನ್ನು ಬೆಳೆಯಲು ಮುಂದಾಗುತ್ತಿದ್ದಾರೆ.
ಲಾಕ್ಡೌನ್ನಿಂದಾಗಿ ಹಲವೆಡೆ ಕೃಷಿ ಕಾರ್ಮಿಕರ ಕೊರತೆ
ಜನವರಿ, ಫೆಬ್ರವರಿ ಮಾಹೆಯಲ್ಲಿ ಕಾಫಿ ಬೆಳೆ ಕುಯ್ಲು ನಡೆಸಿದ ನಂತರ ಮಾರ್ಚ್ನಲ್ಲಿ ಮಳೆ ಬಾರದ ಕಾರಣ ರೈತರು ಕೃತಕವಾಗಿ ಬೆಳೆಗೆ ನೀರು ಸಿಂಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು. ನೀರು ಸಿಂಪಡಿಸಿದ ನಂತರ ಗಿಡಗಸಿ ಹಾಗೂ ಮರಗಸಿಗಳನ್ನು ಮಾಡಿಸಿ ನಂತರ ಮಳೆ ನೋಡಿಕೊಂಡು ಗೊಬ್ಬರ ಹಾಕುವುದು ವಾಡಿಕೆ, ಆದರೆ, ಮಾರ್ಚ್ ಮೂರನೇ ವಾರದಲ್ಲಿ ಲಾಕ್ಡೌನ್ ಆರಂಭವಾಗಿದ್ದರಿಂದ ಕೂಲಿ ಕಾರ್ಮಿಕರ ಕೊರತೆ ಉಂಟಾಯಿತು.
ಕೆಲವು ಎಸ್ಟೇಟ್ಗಳಲ್ಲಿ ಹೊರ ರಾಜ್ಯದ ಕೂಲಿ ಕಾರ್ಮಿಕರು ಅಲ್ಲೆ ನೆಲೆಸಿದ್ದು, ಪಟ್ಟಣಕ್ಕೆ ಸಮೀಪವಿರುವ ಕಾಫಿ ತೋಟಗಳಿಗೆ ಕುಡುಗರಹಳ್ಳಿ ಬಡಾವಣೆ, ಜನತಾ ಮನೆ, ಸಿಪಿಸಿ ಬಡಾವಣೆ, ಕುಶಾಲನಗರ, ಚಂಪಕನಗರ ಮುಂತಾದ ಕಡೆಗಳಿಗೆ ವಾಹನಗಳ ಮುಖಾಂತರ ಕಾಫಿ ತೋಟಗಳಿಗೆ ಹೋಗಿ ಕೆಲಸ ಮಾಡುವುದು ಸಾಮಾನ್ಯವಾಗಿದೆ. ಆದರೆ, ಲಾಕ್ಡೌನ್ ಉಂಟಾಗಿದ್ದರಿಂದ ಇಂತಹ ಕಾರ್ಮಿಕರು ಪಟ್ಟಣದಿಂದ ಗ್ರಾಮಗಳಿಗೆ ಹೋಗಿ ಕೆಲಸ ಮಾಡಲು ಅವಕಾಶ ದೊರಕದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ವಿಳಂಬವಾಗಲು ಕಾರಣವಾಯಿತು.
ಇದೀಗ ಲಾಕ್ಡೌನ್ ತೆರವಾಗಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರಿಂದಾಗಿ ವಾಹನಗಳಲ್ಲಿ ಕಾರ್ಮಿಕರನ್ನು ತುಂಬಲು ಅವಕಾಶವಿಲ್ಲದಾಗಿದೆ. ಲಾಕ್ಡೌನ್ ತೆರೆದರೂ ಸಹ ಕಾರ್ಮಿಕರು ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶವಿಲ್ಲದೇ ಕೃಷಿ ಚಟುವಟಿಕೆಗಳಿಗೆ ಪೆಟ್ಟು ಬಿದ್ದಿದೆ. ಕೆಲವೆಡೆ ಮಾತ್ರ ಕದ್ದು ಮುಚ್ಚಿ ಕೂಲಿ ಕಾರ್ಮಿಕರನ್ನು ಸಾಗಿಸಿ ಕೆಲಸ ಮಾಡಿಸಲಾಗುತ್ತಿದೆ.
ಇನ್ನು ಹೊರರಾಜ್ಯದ ಹಾಗೂ ಹೊರ ಜಿಲ್ಲೆಗಳ ಹಲವು ಕಾರ್ಮಿಕರುಗಳು ಲಾಕ್ಡೌನ್ ಭಯದಿಂದ ತಮ್ಮ ರಾಜ್ಯ ಹಾಗೂ ಊರುಗಳಿಗೆ ಹೋಗುತ್ತಿದ್ದು, ಇದರಿಂದಾಗಿ ದೊಡ್ಡ ದೊಡ್ಡ ಎಸ್ಟೇಟ್ಗಳಲ್ಲಿ ಸಹ ಕೃಷಿ ಚಟುವಟಿಕೆಗಳಿಗೆ ಪೆಟ್ಟು ಬಿದ್ದಿದೆ.
ದೊಡ್ಡ ದೊಡ್ಡ ಎಸ್ಟೇಟ್ಗಳಲ್ಲಿ ಕೆಲಸ ನೀಡಲು ಪರದಾಟ
ಬಹುತೇಕ ದೊಡ್ಡ ಕಾಫಿ ತೋಟಗಳ ಎಸ್ಟೇಟ್ಗಳ ಮಾಲಿಕರು ಹೊರ ಊರುಗಳಲ್ಲಿ ಉದ್ಯಮಗಳನ್ನ ಹೊಂದಿದ್ದು, ಇದೀಗ ಲಾಕ್ಡೌನ್ ನಿಂದಾಗಿ ಉದ್ಯಮಗಳು ನಷ್ಟ ಅನುಭವಿಸುತ್ತಿರುವುದರಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಿಸಲು ಮುಂದಾಗದಿರುವುದಿರಂದ ಹೊರ ರಾಜ್ಯಗಳ ಕಾರ್ಮಿಕರು ಗುಳೆ ಏಳಲು ಕಾರಣವಾಗಿದೆ. ಮುಂದಿನ ಸಾಲಿನಲ್ಲಂತೂ ಕೂಲಿ ಕಾರ್ಮಿಕರ ಕೊರತೆ ವ್ಯಾಪಕವಾಗಿ ಬಾದಿಸುವುದರಲ್ಲಿ ಅನುಮಾನವಿಲ್ಲ.
ಹೊರರಾಜ್ಯದವರ ಗುಳೆಯಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಬೇಡಿಕೆ ಹೆಚ್ಚಿ ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ತೋಟದ ಮಾಲಿಕರಿಗೆ ಕಾರ್ಮಿಕರು ಸಿಗದಂತ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ.
ಕೆಲಸ ನಿಗದಿತ ಅವಧಿಯಲ್ಲಿ ಆಗದೇ ಪರದಾಟ