ಹಾಸನ:ಅರಕಲಗೂಡು ತಾಲೂಕಿನ ಬಸವಾಪಟ್ಟಣ, ರುದ್ರಪಟ್ಟಣ ಗ್ರಾಮಗಳ ನಡುವೆ ಸಂಪರ್ಕ ಸೇತುವೆ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಹಾಗೂ ಶಾಸಕ ಎ.ಟಿ. ರಾಮಸ್ವಾಮಿ ಸ್ಥಳ ಪರಿಶೀಲನೆ ನಡೆಸಿದರು.
ಬಸವಾಪಟ್ಟಣ, ರುದ್ರಪಟ್ಟಣ ಗ್ರಾಮಗಳ ನಡುವೆ ಸಂಪರ್ಕ ಸೇತುವೆ ರಸ್ತೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ರುದ್ರಪಟ್ಟಣ, ಬಸವಾಪಟ್ಟಣ ಗ್ರಾಮಗಳು ನದಿ ದಂಡೆಯಿಂದ ಎರಡು ಗ್ರಾಮಗಳ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆ ನಿರ್ಮಾಣದ ಭಾಗವನ್ನು ಗುರುತಿಸುವ ನಿಟ್ಟಿನಲ್ಲಿ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಶಾಸಕರು, ಈ ಹಿಂದೆ ಶಾಶ್ವತ ಸೇತುವೆಗೆ 14.78 ಕೋಟಿ ರೂಪಾಯಿ ಮಂಜೂರಾಗಿತ್ತು. ಆದರೆ ಕೇವಲ ಸೇತುವೆ ನಿರ್ಮಾಣದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.
ಎರಡು ಗ್ರಾಮಗಳ ಮುಖ್ಯ ರಸ್ತೆಯಿಂದ ಸೇತುವೆ ತುದಿಯವರೆಗೆ ರಸ್ತೆ ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಯೋಜನೆಯಲ್ಲಿ ರಸ್ತೆಗಾಗಿ ರೈತರು ಹಾಗೂ ಭೂ ಮಾಲೀಕರು ನಿಗದಿಪಡಿಸಿದ ಜಮೀನುಗಳನ್ನು ಬಿಟ್ಟು ಸೇತುವೆ ನಿರ್ಮಾಣಕ್ಕೆ ಸಹಕರಿಸುವಂತೆ ಅವರು ಕೋರಿದರು.
ಒಟ್ಟು 14.78 ಕೋಟಿ ಇದ್ದ ಶಾಶ್ವತ ಸೇತುವೆ ಸುಮಾರು 20 ಕೋಟಿಗೆ ಏರಿಕೆಯಾಗಲಿದೆ. ಅಲ್ಲದೆ ರಸ್ತೆ ನಿರ್ಮಾಣ ಬಸವಾಪಟ್ಟಣ ಮುಖ್ಯ ರಸ್ತೆಯಿಂದ ಸುಮಾರು 800 ಮೀ. ಮತ್ತು ರುದ್ರಪಟ್ಟಣ ಮುಖ್ಯ ರಸ್ತೆಯಿಂದ ಸೇತುವೆವರೆಗೆ 1600 ಮೀ, ಅಂದ್ರೆ ಸುಮಾರು 2.4 ಕಿಲೋ ಮೀಟರ್ ರಸ್ತೆ ನಿರ್ಮಾಣವನ್ನು ಶೀಘ್ರ ನಿರ್ಮಾಣಕ್ಕೆ ಯೋಜನಾ ನಕ್ಷೆಯೊಂದಿಗೆ ಇಂದು ಗ್ರಾಮಸ್ಥರೊಂದಿಗೆ ಚರ್ಚಿಸಲಾಯಿತು.
ಇದೇ ವೇಳೆ ಕೆ.ಎ.ಆರ್.ಐ.ಡಿ.ಸಿ.ಎಲ್ ಕಾರ್ಯಪಾಲಕ ಅಭಿಯಂತರ ಮಂಜುನಾಥ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ಸುರೇಂದ್ರನಾಯ್ಕ, ಬಸವಾಪಟ್ಟಣ ಕ್ಷೇತ್ರದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಬಿ.ಸಿ. ವೀರೇಶ್, ಗ್ರಾಮ ಪಂಚಾಯತ್ ಸದಸ್ಯ ಟಿ.ಸಿ. ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವನಂಜೇಗೌಡ, ನೀರಾವರಿ ಇಲಾಖೆ ಅಭಿಯಂತರ ಜಯರಾಂ ಸೇರಿದಂತೆ ಮುಂತಾದವರು ಹಾಜರಿದ್ದರು.