ಹಾಸನ: ಮದ್ಯದ ಬೆಲೆ 30 ರೂಪಾಯಿ ಇದ್ದರೇ ಅದನ್ನು 250 ರೂ. ಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಸಂಬಂಧಪಟ್ಟ ಅಬಕಾರಿ ಮುಖ್ಯಾಧಿಕಾರಿಯನ್ನು ಅಮಾನತು ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಆಗ್ರಹಿಸಿದ್ದಾರೆ. ಅಲ್ಲದೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಲಾಕ್ಡೌನ್ ಮುಗಿದ ಮೇಲೆ ಕಾಂಗ್ರೆಸ್ನಿಂದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರಮವಾಗಿ ಯಾರಾದರೂ ಮದ್ಯ ಮಾರಾಟ ಮತ್ತು ಕಳಭಟ್ಟಿ ಮಾರಾಟ ಮಾಡಿದರೇ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಆದೇಶ ನೀಡಿದ್ದಾರೆ. ಆದರೇ ಲಾಕ್ಡೌನ್ ಆದೇಶ ಬಂದ ದಿನದಿಂದ ಇಲ್ಲಿವರೆಗೂ ರಾಜರೋಷವಾಗಿಯೇ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಒಂದು ಮದ್ಯದ ಬೆಲೆ 60 ರೂ, ಇದ್ದರೆ ಅದನ್ನು 500ರಿಂದ 600 ರೂ.ಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಹಾಸನ ನಗರದ ವಿಜಯನಗರ ಬಡಾವಣೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಆತನನ್ನು ಹಿಡಿಯಲು ಹೋದ ವೇಳೆ ಕೈಯಲ್ಲಿದ್ದ ಬ್ಯಾಗನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾನೆ, ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಸೇರಿದಂತೆ ಯಾರ ಬಳಿ ಎಣ್ಣೆ ಸಿಗದಿದ್ದರೂ ಬಿಜೆಪಿ ಕಾರ್ಯಕರ್ತರ ಬಳಿ ಸಿಗುತ್ತಿದೆ ಎಂದು ಆರೋಪಿಸಿದರು. ಅಕ್ರಮ ಮದ್ಯ ಮಾರಾಟ ವಿಚಾರವಾಗಿ ಅಬಕಾರಿ ಮುಖ್ಯ ಅಧಿಕಾರಿಯನ್ನು ಕೂಡಲೇ ಅಮಾನತು ಮಾಡಬೇಕು. ಜೊತೆಗೆ ಇದಕ್ಕೆಲ್ಲಾ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಕ್ಷೇತ್ರದ ಶಾಸಕರೇ ನೇರಹೊಣೆ ಎಂದು ದೂರಿದರು.
ಅಕ್ರಮ ಮದ್ಯ ಮಾರಾಟ ಮಾಡಲು ಅವಕಾಶ ಕೊಡುವ ಬದಲು ಸಾರ್ವಜನಿಕವಾಗಿಯೇ ಎಣ್ಣೆ ಅಂಗಡಿ ಬಾಗಿಲು ತೆಗೆದು ಅವಕಾಶ ಕಲ್ಪಿಸಬೇಕಾಗಿತ್ತು ಎಂದು ಸಲಹೆ ನೀಡಿದರು. ಅಕ್ರಮ ಮದ್ಯ ಮಾರಾಟದಲ್ಲಿ ಇದುವರೆಗೂ ಕೋಟ್ಯಂತರ ರೂಪಾಯಿ ಮಾಡಿಕೊಂಡಿದ್ದು, ಈ ಬಗ್ಗೆ ವಿರೋಧಿಸಿ ಲಾಕ್ಡೌನ್ ಮುಗಿದ ನಂತರ ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೆಚ್ ಕೆ ಮಹೇಶ್ ಎಚ್ಚರಿಸಿದರು.