ಹಾಸನ:ನಗರದ ಸಂಪಿಗೆ ರಸ್ತೆಯ ನಾಲ್ಕನೇ ಕ್ರಾಸ್‌ನಲ್ಲಿನ ವಾಣಿಜ್ಯ ಮಳಿಗೆಗಳ ಮುಂದಿನ ಮರಗಳನ್ನು ಕಡಿದು ಹಾಕಲಾಗಿದೆ.
ಕೃಷ್ಣ ಟ್ರಸ್ಟ್ ಕಟ್ಟಡದಲ್ಲಿರುವ ಮಳಿಗೆಗಳ ಮುಂದೆ ಮೂವತ್ತು ವರ್ಷದ ಮೂರು ಸಂಪಿಗೆ ಮರಗಳನ್ನು ನೆಲಕ್ಕುರಳಿಸಲಾಗಿದೆ. ವ್ಯಾಪಾರಕ್ಕೆ ತೊಂದರೆ ಆಗುತ್ತದೆ ಎಂಬ ಕಾರಣಕ್ಕೆ ಕಟ್ಟಡದ ಮಾಲೀಕರು ಮರಗಳನ್ನು ಬುಡಸಮೇತ ಕಡಿಸಿದ್ದಾರೆ. ಇದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಮರದ ರೆಂಬೆ, ಕೊಂಬೆ ಕತ್ತರಿಸುವುದಾಗಿ ಹೇಳಿದ್ದ ಮಾಲೀಕರು ಸಂಪೂರ್ಣವಾಗಿ ಕಡಿದು ಹಾಕಿದ್ದಾರೆ. ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದರು.
ಹಲವು ವರ್ಷಗಳಿಂದ ಸಂಪಿಗೆ ಮರಗಳು ನೆರಳು ಕೊಡುತ್ತಿದ್ದವು. ಈ ಮರದಿಂದ ಸಂಪಿಗೆ ಹೂವು ಕಿತ್ತು ಹಲವರು ಜೀವನ ನಡೆಸುತ್ತಿದ್ದರು. ಯಾರಿಗೂ ತೊಂದರೆ ಆಗಿರಲಿಲ್ಲ. ಮರ ಕಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ವಕೀಲರಾದ ಜೆ.ಪಿ.ಶೇಖರ್, ಪ್ರದೀಪ್ ಆಗ್ರಹಿಸಿದ್ದಾರೆ.