ಹಾಸನ:ಕೆ.ಆರ್. ಪೇಟೆಯಲ್ಲಿ ಅಳವಡಿಸಿದ್ದ ತಂತ್ರಗಾರಿಕೆಯನ್ನೇ ಶಿರಾದಲ್ಲಿ ಅಳವಡಿಸಿ ಉಪಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸಂತಸ ವ್ಯಕ್ತಪಡಿಸಿದರು.
ಹಾಸನಾಂಬೆ ದರ್ಶನ ಮುಗಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರ ನಾಯಕತ್ವದಲ್ಲಿ ನಡೆದ ಎರಡು ಕ್ಷೇತ್ರದ ಉಪಾಚುನಾವಣೆಯಲ್ಲಿ ನಿರೀಕ್ಷೆಯಂತೆ ಗೆದ್ದಿದ್ದೇವೆ. ಜನ ಕೆಲಸ ಮಾಡಿರುವುದಕ್ಕೆ ಓಟು ಕೊಟ್ಟಿದ್ದಾರೆ ಎಂಬುದಕ್ಕೆ ಶಿರಾ ಕ್ಷೇತ್ರವೇ ಸಾಕ್ಷಿಯಾಗಿದೆ. ಇನ್ನು ಮುನಿರತ್ನ ಅವರು ರಾಜೀನಾಮೆ ಕೊಟ್ಟಿದ್ದರೂ ಕೊರೊನಾ ಸಮಯದಲ್ಲಿ ಕೆಲಸ ಮಾಡಿದ್ದಾರೆ. ಹಾಗಾಗಿ ಅವರು ಅಲ್ಲಿ ಗೆದಿದ್ದಾರೆ ಎಂದರು.
ಮಾಜಿ ಸಚಿವ ರೇವಣ್ಣ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರತಿಪಕ್ಷದಲ್ಲಿದ್ದವರು ಬೇರೆಯವರು ಅಧಿಕಾರಿದಲ್ಲಿದ್ದಾಗ ಮಾತನಾಡುತ್ತಾರೆ. ಈಗ ಚುನಾವಣೆ ಗೆದ್ದಾಗಿದೆ. ಮತ ಕೊಟ್ಟವರು ಬುದ್ಧಿವಂತರು, ಪ್ರಬುದ್ಧರಿದ್ದಾರೆ. ಚುನಾವಣೆ ಸೋತ ನಂತರ ಈ ರೀತಿ ಹೇಳಿಕೆ ಕೊಡುವುದು ಸಹಜ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಕಗ್ಗಂಟಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು, ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು ರಾಜಕಾರಣದಲ್ಲಿ ಯಾರಾದರೂ ಇದ್ದರೆ ಅದು ಯಡಿಯೂರಪ್ಪನವರು ಮಾತ್ರ. ಹೈಕಮಾಂಡ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಪಕ್ಷ. ಹಾಗಾಗಿ ಮುಖ್ಯಮಂತ್ರಿಗಳು ಒಮ್ಮೆ ಮಾತು ಕೊಟ್ಟರೆ ಅದರಂತೆ ನಡೆದುಕೊಳ್ಳುತ್ತಾರೆ ಎಂದರು.