ಹಾಸನ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಹೋದ್ರಲ್ಲ, ಅದೇ ರೀತಿ ಮುಸಲ್ಮಾನ್ ಯುವಕರು ಸಾವಿಗೀಡಾದಾಗ ಅವರ ಮನೆಗೂ ಹೋಗಿ ಸಾಂತ್ವನ ಹೇಳಬೇಕಲ್ವಾ?. ಮುಖ್ಯಮಂತ್ರಿ ಆ ಕೆಲಸ ಯಾಕೆ ಮಾಡಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಗುಡುಗಿದರು.
ಶುಕ್ರವಾರ ರಾತ್ರಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಹಿಂದುತ್ವವಾದ ಪ್ರತಿಪಾದಿಸುತ್ತಿದ್ದಾರೆ. ಹಿಂದೂಗಳು ಸಾವಿಗೀಡಾದಾಗ ಅವರ ಮನೆಗೆ ತೆರಳಿ, ಮುಸಲ್ಮಾನರ ಮನೆಗೆ ತೆರಳದಿರುವುದು ಎಷ್ಟು ಸರಿ?. ರಾಜ್ಯದ ಮುಖ್ಯಮಂತ್ರಿ ಎಂದರೆ ಎಲ್ಲರಿಗೂ ತಂದೆ ಸಮಾನ. ಎಲ್ಲರ ಕಷ್ಟ ಸುಖಗಳಿಗೂ ಜಾತಿ ಭೇದವಿಲ್ಲದೆ, ಪರಿಹಾರ ನೀಡಬೇಕು. ಆ ಕೆಲಸವನ್ನು ಮುಖ್ಯಮಂತ್ರಿಗಳು ಮಾಡಲಿಲ್ಲ ಎಂದು ಹರಿಹಾಯ್ದರು.
ಬಿಜೆಪಿಯವರು ಯಾವುದೇ ನೀಚ ಕೆಲಸ ಮಾಡಲು ತಯಾರಾಗಿದ್ದಾರೆ. ಅವರು ನೀಚರು. ನಮ್ಮದು ದಾವಣಗೆರೆ ಸಮಾವೇಶ ಆಯ್ತಲ್ಲಾ. ಆದಾದ ಮೇಲೆ ಆತಂಕಗೊಂಡಿದ್ದಾರೆ. ಅವರಿಗೆ ಸೋಲಿನ ಭಯ ಕಾಡಿದೆ. ಅದಕ್ಕೆ ನಾನು ಹೋದಲೆಲ್ಲ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದಾರೆ. ಇದು ರಾಜ್ಯ ಮಟ್ಟದ ಸರ್ಕಾರಿ ಪ್ರಾಯೋಜಕತ್ವದ ಪ್ರತಿಭಟನೆ ಎಂದು ಸಿದ್ದರಾಮಯ್ಯ ದೂರಿದರು.
ಇದನ್ನೂ ಓದಿ:ಮೊಟ್ಟೆ ಪ್ರಕರಣ: ಬೆಂಗಳೂರಲ್ಲಿ ಮಾಜಿ ಸಿಎಂಗಿಲ್ಲ ಸೂಕ್ತ ಭದ್ರತೆ.. ಬಿಜೆಪಿ ಶಾಸಕರಿಗೆ ಭರ್ಜರಿ ಸುರಕ್ಷತೆ