ಸಕಲೇಶಪುರ: ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಗೌರಮ್ಮ ವೆಂಕಟೇಶ್ ಹೇಳಿದರು.
ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ಆಶಾ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಆಶಾ ಕಾರ್ಯಕರ್ತೆಯರು, ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಜನರ ಆರೋಗ್ಯದ ಮಾಹಿತಿ ಕಲೆ ಹಾಕಿ ಆರೋಗ್ಯ ಇಲಾಖೆಗೆ ನೀಡುತ್ತಿದ್ದಾರೆ. ಆದರೆ ಇದೀಗ ಆಶಾ ಕಾರ್ಯಕರ್ತೆಯರು ಅವರಿಗೆ ಬೇಡವಾಗಿದೆ. ಸರ್ಕಾರ ಕೂಡಲೇ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ 12000 ರೂ. ಮಾಸಿಕ ಗೌರವ ಧನ ನೀಡಬೇಕು. ಕೋವಿಡ್ 19 ವಿರುದ್ಧ ಹೋರಾಟಕ್ಕೆ ಅಗತ್ಯವಿರುವಷ್ಟು ಸಂರಕ್ಷಣಾ ಸಾಮಗ್ರಿಗಳನ್ನು ನೀಡಬೇಕು. ಕೋವಿಡ್-19 ಸೋಂಕಿಗೆ ಒಳಗಾದ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ಪರಿಹಾರ ಹಾಗೂ ಉಚಿತ ಚಿಕಿತ್ಸೆ ನೀಡಬೇಕು ಎಂದರು.