ಹಾಸನ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ದ್ರಾಕ್ಷಿ ಗಿಡಗಳನ್ನು ನಾಶ ಮಾಡಿದ ಪ್ರಕರಣ ಮಾಸುವ ಮುನ್ನವೇ ಹಾಸನ ಜಿಲ್ಲೆಯಲ್ಲಿ ಫಸಲಿಗೆ ಬಂದಿದ್ದ 500ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಕಡಿದು ಹಾಕಿರುವ ಘಟನೆ ನಡೆದಿದೆ.
ಬೇಲೂರು ತಾಲೂಕಿನ ಅಜ್ಜೇನಹಳ್ಳಿಯಲ್ಲಿ ಗ್ರಾಮದ ವೀರಲಿಂಗೇಗೌಡರಿಗೆ ಸೇರಿದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಈ ಗಿಡಗಳನ್ನು ನೆಟ್ಟು ಆರು ವರ್ಷಗಳಾಗಿದ್ದು, ಫಸಲಿಗೆ ಬರುತ್ತಿತ್ತು. ಆದರೆ, ಕಿಡಿಗೇಡಿಗಳು ಫಸಲು ಕೈ ಸೇರುವ ಮೊದಲೇ ನಾಶಪಡಿಸಿದ್ದಾರೆ.
ಅಡಿಕೆ ಗಿಡಗಳಿಗೆ ನೀರು ಹಾಕಲು ಹೋದಾಗ ಕೃತ್ಯ ಬೆಳಕಿಗೆ ಬಂದಿದೆ. ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬೇಲೂರು ತಹಶೀಲ್ದಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ತಹಶೀಲ್ದಾರ್, 'ಇದು ಆರು ವರ್ಷದ ಗಿಡ ಎಂದು ಹೇಳುತ್ತಿದ್ದಾರೆ. ಕೆಲವು ಗಿಡಗಳು ಚೆನ್ನಾಗಿ ಬಂದಿದ್ದು, ಕೆಲವು ಚೆನ್ನಾಗಿ ಬಂದಿಲ್ಲ. ನಾಶವಾಗಿರುವ ಬೆಳೆಗೆ ಸರಿಯಾದ ಪರಿಹಾರ ನೀಡಲಾಗುವುದು' ಎಂದು ಭರವಸೆ ನೀಡಿದರು.