ಹಾಸನ:ಕುಮಾರಸ್ವಾಮಿ, ರೇವಣ್ಣ ತಮ್ಮ ಮಕ್ಕಳಿಗಾಗಿ ದೇವೇಗೌಡರನ್ನು ತೆಗೆದ್ರು, ಆದರೆ ಲಾಭ ಪಡೆದವರು ರೇವಣ್ಣ ಮತ್ತು ಮಗ ಮಾತ್ರ ಎಂದು ಮಾಜಿ ಸಚಿವ ಎ.ಮಂಜು ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಕಿಡಿಕಾರಿದ ಎ.ಮಂಜು ನಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್, ದಳ, ಬಿಜೆಪಿ ಅಂತಾ ರಾಜಕಾರಣ ಇಲ್ಲ. ಇಲ್ಲಿ ಇರೋದು ದೇವೇಗೌಡರ ಕುಟುಂಬ ವಿರುದ್ಧದ ರಾಜಕಾರಣ. ಜಿಲ್ಲೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಉಳಿಯಬೇಕು ಅಂದ್ರೆ ನಾವು ಒಟ್ಟಿಗೆ ಸೇರಿ ಅವರನ್ನು ಸದೆಬಡಿಯಬೇಕು ಎಂದು ತಿಳಿಸಿದರು.
ಈಗ ನಮ್ಮ ಸರ್ಕಾರ ಇದೆ. ಜನಪರವಾದ ಕೆಲಸ ಮಾಡಲು ಅವಕಾಶ ಇದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ 4 ರಿಂದ 5 ಕ್ಷೇತ್ರ ಗೆಲ್ಲುತ್ತೇವೆ. ನಾವು ದೇವೇಗೌಡರ ಕುಟುಂಬದ ವಿರೋಧಿಗಳು. ಇಡೀ ಜಿಲ್ಲೆಯ 70 ರಷ್ಟು ಜನ ದೇವೇಗೌಡರ ಕುಟುಂಬದ ವಿರುದ್ಧ ಇದ್ದಾರೆ. ದೇವೇಗೌಡರು ಕೊನೆ ಸಾರಿ ಪಾರ್ಲಿಮೆಂಟ್‌ನಲ್ಲಿ ಗೆಲ್ಲಲಿ ಎಂದು ಆಸೆಪಟ್ಟೆ. ಆದರೆ ಮಕ್ಕಳು, ಮೊಮ್ಮಕ್ಕಳನ್ನ ರಾಜಕೀಯವಾಗಿ ಉಳಿಸಲು ಹೊರಾಟ ರೇವಣ್ಣ ಹಾಗೂ ಕುಮಾರಸ್ವಾಮಿ ಗೌಡರ ಸೋಲಿಗೆ ಕಾರಣರಾದರು. ಇಲ್ಲಿ ಲಾಭ ಪಡೆದುಕೊಂಡವರು ರೇವಣ್ಣ ಮಾತ್ರ. ದೇವೇಗೌಡರು ಇದುವರೆಗೂ ಪಕ್ಷ ಸಂಘಟನೆ ಬಿಟ್ಟರೆ ರಾಜ್ಯದ ಅಭಿವೃದ್ಧಿಗೆ ರಾಜಕಾರಣ ಮಾಡುತ್ತೇನೆ ಎಂದು ಹೇಳಿಲ್ಲ ಎಂದು ಎ.ಮಂಜು ಕಿಡಿಕಾರಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂಬ ಮಾಜಿ ಸಚಿವ ರೇವಣ್ಣ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ರೇವಣ್ಣ ಆರೋಪ ಮಾಡೋದ್ರಲ್ಲಿ ನಿಸ್ಸೀಮರು. ಇವರಿಬ್ಬರು ಅಣ್ಣ ತಮ್ಮಂದಿರು ಸೇರಿಕೊಂಡು ಕ್ಯಾಬಿನೆಟ್, ಸರ್ಕಾರದ ಆದೇಶ ಇಲ್ಲದೇ ಇರೋದನ್ನು ಸ್ಯಾಂಕ್ಷನ್ ಮಾಡಿದ್ದಾರೆ. ಈ ರೀತಿಯ ಕಾನೂನು ಅವರು ಅಣ್ಣ, ತಮ್ಮಂದಿರು ಇದ್ದಾಗ ಮಾತ್ರ ನಡೆಯುತ್ತೆ. ಯಡಿಯೂರಪ್ಪ ರಾಜ್ಯದ ಬಗ್ಗೆ ಚಿಂತೆ ಇರುವ ಅಪರೂಪದ ಮುಖ್ಯಮಂತ್ರಿ. ಯಡಿಯೂರಪ್ಪ ಹೋರಾಟದಿಂದ ಬಂದವರು. ಆದರೆ ಇವರು ಅಪ್ಪನ ಹೆಸರು, ಕೃಪಾಪೋಷಿತದಿಂದ ಬಂದವರು ಎಂದು ಆಕ್ರೋಶ ಹೊರಹಾಕಿದ್ದಾರೆ.