ಹಾಸನ/ಅರಕಲಗೂಡು:ಮದ್ಯಪಾನ ಮಾಡಿ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಅಪಘಾತ ಮಾಡಿದ್ದಲ್ಲದೆ, ಹೈಡ್ರಾಮಾ ಮಾಡಿ ಪೊಲೀಸರಿಗೇ ಅವಾಜ್ ಹಾಕಿರುವ ಘಟನೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ.
ಅರಕಲಗೂಡು ಮೂಲದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿರುವ ಮಹೇಶ್ ಎಂಬಾತ ದ್ವಿಚಕ್ರ ವಾಹನ ಸಂಚರಿಸುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಆದರೆ, ಕಾರು ಚಾಲಕ ಸಮಯ ಪ್ರಜ್ಞೆಯಿಂದ ಮುಂದಾಗುತ್ತಿದ್ದ ಅನಾಹುತ ತಪ್ಪಿಸಿದ್ದಾನೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ಮಾಡಿದ್ದಲ್ಲದೆ ಹೈಡ್ರಾಮಾ ಇನ್ನು ಕಾರಿನ ಪ್ರಯಾಣಿಕರು ಬೆಂಗಳೂರು ಕಡೆಯಿಂದ ಕುಟುಂಬದ ಜೊತೆ ಮಡಿಕೇರಿಯತ್ತ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ. ಮದ್ಯಪಾನ ಮಾಡಿ ಅಜಾಗರೂಕತೆಯಿಂದ ಚಾಲನೆ ಮಾಡಿದ್ದಷ್ಟೇ ಅಲ್ಲದೇ, ಈ ಬೈಕ್ ಸವಾರ ಸಹಾಯಕ್ಕೆ ಬಂದವರ ಮೇಲೆಯೇ ಮುಗಿಬಿದ್ದಿದ್ದಾನೆ.
ಸ್ಥಳಕ್ಕೆ ಬಂದ ಪೊಲೀಸರ ಮೇಲೆಯೂ ರಂಪಾಟ ಮಾಡಿ ಹುಚ್ಚಾಟ ಮೆರೆದಿದ್ದಾನೆ. ಜೊತೆಗೆ, ಅವರ ಮೇಲೆ ಹಲ್ಲೆಗೂ ಮುಂದಾಗಿದ್ದಾನೆ. ನಾನೊಬ್ಬ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತ. ನನ್ನನ್ನೇ ಪೊಲೀಸ್ ಠಾಣೆಗೆ ಬನ್ನಿ ಎಂದು ಕರೆಯುವಷ್ಟು ಧೈರ್ಯವೇ ನಿಮಗೆ? ನಾನು ಬರುವುದಿಲ್ಲ ಎಂದು ಅವಾಜ್ ಹಾಕಿದ್ದಾನೆ.
ಕೊನೆಗೆ ಈತನ ಪೋಷಕರು ಸ್ಥಳಕ್ಕಾಗಮಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಈತನ ವಿರುದ್ಧ ದೂರು ದಾಖಲಾಗಿದೆ.