ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 13 ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 112ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ವರದಿಯಾದ ಎಲ್ಲಾ ಪಾಸಿಟಿವ್ ಪ್ರಕರಣಗಳಿಗೆ ಮಹಾರಾಷ್ಟ್ರದಿಂದ ಬಂದ ಹಿನ್ನಲೆ ಇದೆ. ಎಲ್ಲರೂ ಚನ್ನರಾಯಪಟ್ಟಣ ತಾಲೂಕಿಗೆ ಸೇರಿದವರಾಗಿದ್ದಾರೆ. ಸೋಂಕು ಪತ್ತೆಯಾದ ಎಲ್ಲರನ್ನೂ ನಗರದ ಕೊರೊನಾ ಆಸ್ಪತ್ರೆಯಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈವರಗೆ ದಾಖಲಾಗಿರುವ ಎಲ್ಲರೂ ಆರೋಗ್ಯಯುತವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದರು.
ನಗರದ ಉತ್ತರಬಡಾವಣೆ ಹಾಗೂ ಬಿ. ಕಾಟೀಹಳ್ಳಿ ಪ್ರದೇಶಗಳನ್ನು ನಿರ್ಬಂಧಿತ ವಲಯಗಳನ್ನಾಗಿ ಗುರುತಿಸಲಾಗಿದ್ದು, ಉತ್ತರ ಬಡಾವಣೆಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಅವರ ಸಂಪರ್ಕದಲ್ಲಿದ್ದ 5 ಜನರನ್ನು ಪ್ರಥಮ ಸಂಪರ್ಕಿತರನ್ನಾಗಿ ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರೆಲ್ಲರಿಗೂ ವರದಿ ನೆಗೆಟಿವ್ ಎಂದು ಬಂದಿದೆ. ಬಿ. ಕಾಟೀಹಳ್ಳಿಯಲ್ಲಿ 21 ಜನರನ್ನು ಪ್ರಥಮ ಸಂಪರ್ಕಿತರನ್ನಾಗಿ ಗುರುತಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರಲ್ಲಿ 17 ಮಂದಿಯ ವರದಿ ನೆಗೆಟಿವ್ ಇದ್ದು, 4 ಜನರ ವರದಿ ನಿರೀಕ್ಷಣೆಯಲ್ಲಿದೆ ಎಂದರು.