ಗದಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ತಂತ್ರ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುತಂತ್ರ ನಡೆಯುವುದಿಲ್ಲ. ಉಪ ಚುನಾವಣೆಯ ಎರಡು ಸ್ಥಾನ ಹಾಗೂ ನಾಲ್ಕು ವಿಧಾನ ಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತವೆಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಭವಿಷ್ಯ ನುಡಿದಿದ್ದಾರೆ.
ಗದಗದ ನಿವಾಸದಲ್ಲಿ ಸಚಿವ ಶ್ರೀರಾಮುಲು ಗದಗದ ತಮ್ಮ ನಿವಾಸದಲ್ಲಿ ಮಾಧ್ಯುಮಗೋಷ್ಟಿ ನಡೆಸಿದ ಅವರು, ಡಿ.ಕೆ. ಶಿವಕುಮಾರ್ ನಮ್ಮ ಪಕ್ಷದ ವಿರುದ್ಧ ಸಾಕಷ್ಟು ಟೀಕೆ ಟಿಪ್ಪಣಿ ಮಾಡ್ತಿದ್ದಾರೆ. ಅವರಿಗೆ ಈಗ ಸಹೋದರ, ಸಂಸದ ಡಿ.ಕೆ ಸುರೇಶ್ ಕ್ಷೇತ್ರದ ವಿಧಾನಸಭೆ ಕ್ಷೇತ್ರ ಉಳಿಸಿಕೊಳ್ಳುವ ಪ್ರತಿಷ್ಠೆ ಇದೆ. ಈ ಬಾರಿ ಆರ್ ಆರ್ ನಗರ ಕ್ಷೇತ್ರ ಜಿದ್ದಾಜಿದ್ದಿನ ಆಖಾಡವಾಗಿದೆ. ಸಹೋದರನ ಕ್ಷೇತ್ರದಲ್ಲಿ ಕಾಂಗ್ರೆಸ್ ಎಲ್ಲಿ ಸೋಲುತ್ತೋ ಎಂಬ ಹತಾಶೆ ಕಾಡುತ್ತಿದೆ ಎಂದರು.
ಮಹಾಭಾರತ ಯುದ್ಧದ ಚಕ್ರವ್ಯೂಹದಲ್ಲಿ ಅಭಿಮನ್ಯು ಹೇಗೆ ಸಿಲುಕಿಕೊಳ್ತಾನೋ ಹಾಗೇ ಡಿಕೆಶಿ ಚಕ್ರವ್ಯೂಹದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಸಚಿವರು ಲೇವಡಿ ಮಾಡಿದರು. ಖಾತೆ ಬದಲಾವಣೆ ಸಂಬಂಧ ಪ್ರತಿಕ್ರಿಯಿಸಿದ ಶ್ರೀರಾಮುಲು ಅವರು, ಸಮಾಜ ಕಲ್ಯಾಣ ಖಾತೆ ಸಿಕ್ಕಿದ್ದಕ್ಕೆ ಖುಷಿ ಇದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿ ನಾನು ಮಹತ್ತರವಾದ ಬದಲಾವಣೆ ಮಾಡುತ್ತೇನೆ. ಸಮಾಜ ಕಲ್ಯಾಣ ಇಲಾಖೆಯ ಮಕ್ಕಳು ಓಲಿಂಪಿಕ್ ನಲ್ಲಿ ಭಾಗವಹಿಸುವಷ್ಟು ಬದಲಾವಣೆ ಮಾಡುತ್ತೇನೆ ಎಂದರು.
ಡಿಸಿಎಂ ಹುದ್ದೆ ಕೈತಪ್ಪಿರೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ನಾನು ಡಿಸಿಎಂ ಆಗಬೇಕು ಎಂಬುದು ಜನರ ಅಭಿಪ್ರಾಯವಾಗಿತ್ತು. ಆದರೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿಲ್ಲ. ಬೇರೆ ಬೇರೆ ಕಾರಣಗಳಿಂದ ಡಿಸಿಎಂ ಸ್ಥಾನ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಸಿಎಂ ಹಾಗೂ ರಾಷ್ಟ್ರೀಯ ನಾಯಕರ ಆಶೀರ್ವಾದ ಇದ್ದರೆ ಆಗಬಹುದು ಎಂದರು. ಆರೋಗ್ಯ ಇಲಾಖೆಯಲ್ಲಿ ನಯಾ ಪೈಸೆ ಭ್ರಷ್ಟಾಚಾರ ನಡೆದಿಲ್ಲ. ಆರೋಪದ ಕುರಿತು ನಾನು, ಸುಧಾಕರ್ ಹಾಗೂ ಅಶ್ವತ್ಥ್ ನಾರಾಯಣ ಸುದೀರ್ಘ ಚರ್ಚೆ ಮಾಡಿದ್ದೇವೆ. ವಿಧಾನ ಸಭೆಯಲ್ಲಿ ಪ್ರತಿಪಕ್ಷ ನಾಯಕರ ಆರೋಪಕ್ಕೆ ಉತ್ತರ ನೀಡಿದ್ದೇವೆ ಎಂದರು.