ಗದಗ: ರಾಜ್ಯಾದ್ಯಂತ ಕೋವಿಡ್ 2ನೇ ಅಲೆ ತಾಂಡವವಾಡ್ತಿದೆ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ನಲ್ಲಿರೋ ರೋಗಿಗಳೀಗ ಕುಡಿಯುವ ನೀರಿಗಾಗಿ ಹಪಹಪಿಸುತ್ತಿದ್ದಾರೆ.
ಆಸ್ಪತ್ರೆಗೆ ವ್ಹೀಲ್ ಚೇರ್ನಲ್ಲಿ ನೀರಿನ ಕ್ಯಾನ್‌ಗಳನ್ನು ಇಟ್ಟು ಹೊರಗಿರುವ ನೀರಿನ ಘಟಕದಿಂದ ಸಿಬ್ಬಂದಿ ನೀರು ಪೂರೈಸುತ್ತಿದ್ದಾರೆ. ಒಂದು ವೇಳೆ, ಸಿಬ್ಬಂದಿ ನೀರು ತರದೇ ಇದ್ದ ಸಂದರ್ಭದಲ್ಲಿ ರೋಗಿಗಳ ಸಂಬಂಧಿಕರೇ ಹೋಗಿ ತರಬೇಕು. ಹಾಗಾಗಿ, ಕೋವಿಡ್ ಕೇರ್ ಸೆಂಟರ್ನಲ್ಲಿ ಕನಿಷ್ಠ ನೀರಿನ ವ್ಯವಸ್ಥೆ ಇಲ್ಲದೇ ಹೋಯಿತಾ? ಎಂದು ರೋಗಿಗಳು ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಆಸ್ಪತ್ರೆಯಲ್ಲಿ 350 ಕೋವಿಡ್ ಬೆಡ್ ಇದೆ. ಆದ್ರೆ ಒಂದೇ ಒಂದು ನೀರಿನ ಫಿಲ್ಟರ್ ಕಾಣುತ್ತಿಲ್ಲ. ರೋಗಿಗಳಿಗೆ, ವೈದ್ಯರಿಗೆ ಕುಡಿಯಲು ನೀರು ಪೂರೈಸದ ಜಿಮ್ಸ್ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಆಸ್ಪತ್ರೆ ಆವರಣವಾಯ್ತು ವೇಸ್ಟ್ ಡಂಪಿಂಗ್ ಯಾರ್ಡ್:
ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ಕೇರ್ ಸೆಂಟರ್ ಆವರಣ ಇತ್ತೀಚೆಗೆ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆ ಆಗಿದೆ. ಆಸ್ಪತ್ರೆಯ ಬಳಿ ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದಾರೆ. ಬಳಕೆ ಮಾಡಿದ ಸರ್ಜಿಕಲ್ ಕ್ಯಾಪ್, ಮಾಸ್ಕ್‌ಗಳನ್ನು ಮೆಡಿಕಲ್ ವೇಸ್ಟ್ ಸ್ಟೋರ್ನಲ್ಲಿ ಹಾಕಬೇಕು. ಮೆಡಿಕಲ್ ವೇಸ್ಟ್ ಸ್ಟೋರ್ ಇದ್ರೂ ಸಹ ಸೋಂಕಿತರು, ಸಂಬಂಧಿ ಹಾಗೂ ವೈದ್ಯಕೀಯ ಸಿಬ್ಬಂದಿ ಬಳಸಿರೋ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಿ ನಿರ್ಲಕ್ಷ್ಯ ತೋರಲಾಗಿದೆ. ಹಾಗಾಗಿ ಬಿಸಾಡಿರುವ ವೈದ್ಯಕೀಯ ವೇಸ್ಟ್ಗಳಿಂದಲೂ ಸ್ಥಳೀಯರಿಗೆ ಸೋಂಕು ಹರಡುವ ಆತಂಕವಿದೆ. ಇದರಿಂದ ಆಸ್ಪತ್ರೆಗೆ ಬಂದ ಇತರೆ ರೋಗಿಗಳಲ್ಲಿ ಭಯ ಶುರುವಾಗಿದೆ.