ಕರ್ನಾಟಕ

karnataka

ETV Bharat / state

30 ವರ್ಷಗಳಿಂದ ಸೌಲಭ್ಯ ಮರೀಚಿಕೆ : ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ ಗ್ರಾಮಸ್ಥರು

ನಮ್ಮಿಂದ ಮುಗಿಯುವ ಸಮಸ್ಯೆಯಲ್ಲ. ಜಿಲ್ಲಾಧಿಕಾರಿ ಅವರ ಗಮನಕ್ಕೆ ತರುತ್ತೇವೆ ಎಂದು ಅಧಿಕಾರಿಗಳು ಅಲ್ಲಿಂದ ಮರಳಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ..

villagers decide to gram-panchayat-election-boycott
ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ ಗ್ರಾಮಸ್ಥರು

By

Published : Dec 10, 2020, 10:01 PM IST

ಗದಗ :30 ವರ್ಷಗಳಿಂದ ವಾಸಿಸುತ್ತಿರುವ ಆ ಗ್ರಾಮಸ್ಥರಿಗೆ ಸರ್ಕಾರದ ಸೌಲಭ್ಯಗಳು ಇವತ್ತಿಗೂ ಮರೀಚಿಕೆ. ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಈ ವಿಚಾರ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಇದನ್ನೂ ಓದಿ..ರಾಜ್ಯದಲ್ಲಿ 2 ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಆಯೋಗದ ಘೋಷಣೆ

ಗ್ರಾಮ ಪಂಚಾಯತ್‌ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜ್ಯದ ಎಲ್ಲಾ ಗ್ರಾಮಗಳಲ್ಲೂ ಚುನಾವಣೆ ಲೆಕ್ಕಾಚಾರ ಜೋರಾಗಿದೆ. ಆದರೆ, ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಗುಡ್ಡದ ನಿವಾಸಿಗಳಿಂದ ಮಾತ್ರ ಚುನಾವಣೆ ಬಹಿಷ್ಕಾರದ ಕೂಗು ಕೇಳಿ ಬರುತ್ತಿದೆ.

ಇಷ್ಟಕ್ಕೂ ಗ್ರಾಮಸ್ಥರಿಗೆ ಸಿಗದ ಸೌಲಭ್ಯಗಳೇನು?

ಹಲವು ವರ್ಷಗಳಿಂದ ವಾಸವಾಗಿರುವ ಗ್ರಾಮಸ್ಥರಿಗೆ ಈವರೆಗೂ ಹಕ್ಕು ಪತ್ರ ಸಿಕ್ಕಿಲ್ಲ. ಸುಮಾರು 350 ಮನೆಗಳಿದ್ದು, ಸರ್ಕಾರದಿಂದ ಬರುವ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಶೌಚಾಲಯ, ರಸ್ತೆ, ಚರಂಡಿ ವ್ಯವಸ್ಥೆ ಇಲ್ಲ.

ಕುಡಿಯುವ ನೀರಂತೂ ಇಲ್ಲವೇ ಇಲ್ಲ. ಸಮಸ್ಯೆಗಳ ಕುರಿತು ಈ ಹಿಂದಿನ ಗ್ರಾಪಂ ಸದಸ್ಯರು ಮತ್ತು ಅಧಿಕಾರಿಗಳ ಗಮನಕ್ಕೂ ತಂದಿದ್ದೆವು. ಆದರೆ, ನಮ್ಮ ಪ್ರಶ್ನೆಗಳಿಗೆ ಉತ್ತರ ಬರಲಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಇವತ್ತು ನಾಳೆ ಎಂದು ಮೂವತ್ತು ವರ್ಷಗಳಿಂದ ಗ್ರಾಮದ ಸೌಲಭ್ಯಗಳಿಗೆ ದಾರಿ ಕಾಯುತ್ತಿದ್ದೇವೆ. ಆದರೆ, ಅಧಿಕಾರಿ ವರ್ಗ ಆ ಸೌಲಭ್ಯಗಳನ್ನು ಗ್ರಾಮದತ್ತ ಸುಳಿಯದಂತೆ ತಡೆ ಹಾಕಿದೆ.

ಸೌಲಭ್ಯಕ್ಕಾಗಿ ಪರಿ ಪರಿಯಾಗಿ ಬೇಡಿದರೂ ನಮ್ಮ ಕರುಣೆಯ ಮಾತುಗಳಿಗೆ ಅಧಿಕಾರಿಗಳ ಮನಸ್ಸು ಕರಗಲಿಲ್ಲ. ಹೀಗಾಗಿ, ಪ್ರತಿಭಟನೆ ನಡೆಸಿ ಚುನಾವಣೆ‌ಯಿಂದ ದೂರವಿರುವ ಕಟು ನಿರ್ಧಾರಕ್ಕೆ ಬಂದಿದ್ದೇವೆ ಎಂದು ಗ್ರಾಮಸ್ಥರು ಖಡಾಖಂಡಿತವಾಗಿ ಹೇಳಿದರು.

ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ ಗ್ರಾಮಸ್ಥರು

ಅಧಿಕಾರಿಗಳ ದಿಢೀರ್​ ಭೇಟಿ :ಬಹಿಷ್ಕಾರ ಹಾಕುವುದಾಗಿ ಗ್ರಾಮಸ್ಥರು ಒಮ್ಮತದ ನಿರ್ಧಾರದ ವಿಷಯ ತಿಳಿದು ಲಕ್ಷ್ಮೇಶ್ವರ ತಹಶೀಲ್ದಾರ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಗ್ರಾಮಸ್ಥರ ಜೊತೆಗೆ ಮಾತುಕತೆ ನಡೆಸಿ, ಮನವೊಲಿಸಲು ಮುಂದಾದರು. ಅಧಿಕಾರಿಗಳ ಮಾತಿಗೆ ಜಗ್ಗದ ಗ್ರಾಮಸ್ಥರು, ತಮ್ಮ ಮಾತನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದರು.

ಗೋಮಾಳದ ಜಾಗ :ಗ್ರಾಮದ ಗುಡ್ಡದ ನಿವಾಸಿಗಳು ವಾಸಿಸುತ್ತಿರುವ ಜಾಗ ಗೋಮಾಳಕ್ಕೆ ಸೇರಿದ್ದು, ಹಕ್ಕು ಪತ್ರ ವಿತರಿಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಈ ಸ್ಥಳದಲ್ಲಿ ವಾಸ ಮಾಡುವ ಕೆಲವರಿಗೆ ಹಕ್ಕು ಪತ್ರ ನೀಡಲಾಗಿದ್ದು, ನಮಗೆ ಏಕೆ ನೀಡುತ್ತಿಲ್ಲ ಎಂದು ಅಧಿಕಾರಿಗಳಿಗೆ ಪ್ರಶ್ನಿಸಿದ್ದಾರೆ.

ನಮ್ಮಿಂದ ಮುಗಿಯುವ ಸಮಸ್ಯೆಯಲ್ಲ. ಜಿಲ್ಲಾಧಿಕಾರಿ ಅವರ ಗಮನಕ್ಕೆ ತರುತ್ತೇವೆ ಎಂದು ಅಧಿಕಾರಿಗಳು ಅಲ್ಲಿಂದ ಮರಳಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ABOUT THE AUTHOR

...view details