ಗದಗ:ಇಂದು ಪರಿಸರ ದಿನ. ನೈಸರ್ಗಿಕ ಪರಿಸರ ಸಂಪತ್ತನ್ನು ಉಳಿಸೋಕೆ ಹೆಚ್ಚಾಗಿ ಅಲ್ಲಲ್ಲಿ ಸಸಿಗಳನ್ನ ನೆಟ್ಟು ಪರಿಸರ ಉಳಿಸಿ ಅನ್ನೋ ಘೋಷಣೆಗಳ ಮೂಲಕ ದಿನಾಚರಣೆ ಆಚರಿಸುತ್ತೇವೆ. ನೆಟ್ಟ ಸಸಿಗಳು ಸಂಜೆಯ ವೇಳೆಗೆ ನೆಲಕಚ್ಚಿದರೂ ಅದನ್ನು ನೋಡುವವರು ಇಲ್ಲ. ಇಂತಹ ಸನ್ನಿವೇಶದಲ್ಲಿ ನಮ್ಮ ಒಡಲಲ್ಲೇ ಇರೋ ಅರಣ್ಯ ಸಂಪತ್ತನ್ನು ಸ್ವತಃ ಮನುಕುಲವೇ ತನ್ನ ಕೈಯ್ಯಾರೆ ನಾಶಪಡಿಸ್ತಿರೋದು ವಿಪರ್ಯಾಸವೇ ಸರಿ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗ್ತಿರೋದು ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ.
ಉತ್ತರ ಕರ್ನಾಟಕದ ಪಾಲಿಗೆ ಸಂಜೀವಿನಿ ಪರ್ವತ. ಆದರೆ ಇಂಥ ಪರ್ವತಕ್ಕೆ ಇದೀಗ ಕಂಠಕ ಶುರುವಾಗಿದೆ. ಗಣಿಗಾರಿಕೆಗೆ ಕಾದು ಕುಳಿತಿದ್ದ ರಣ ಹದ್ದುಗಳು ಮತ್ತೆ ಕಪ್ಪತ್ತಗುಡ್ಡವನ್ನು ತಿನ್ನೋಕೆ ಬಾಯ್ತೆರೆದು ಕೂತಿವೆ. ಈಗಾಗಲೇ ರಾಮಗಡ ಮಿನರಲ್ಸ್ ಹಾಗೂ ಬಲ್ಡೋಟಾ ಕಂಪನಿಗಳು ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಸಲು ಮುಂದಾದಾಗ ಇಲ್ಲಿನ ಅನೇಕ ಮಠಾಧೀಶರು, ಸಂಘ-ಸಂಸ್ಥೆಗಳು ಹೋರಾಟದ ಮೂಲಕ ತಡೆಯೊಡ್ಡಿದ್ದವು. ಪರಿಣಾಮ ಕಪ್ಪತ್ತಗುಡ್ಡ ಅರಣ್ಯ ಸಂರಕ್ಷಿತ ಪ್ರದೇಶ ಅಂತ ಸರ್ಕಾರ ಆದೇಶ ನೀಡಿ ಹೋರಾಟಗಾರರಿಗೆ ಗೆಲುವು ತಂದುಕೊಟ್ಟಿತ್ತು. ಆದರೆ ಇದೀಗ ಮತ್ತೆ ಹಸಿರುಗಿರಿಯನ್ನ ಬರಿದಾಗಿಸೋಕೆ ಗಣಿಗಳ್ಳರು ಸಜ್ಜಾಗಿದ್ದಾರೆ.