ಗದಗ:ಆಸ್ಪತ್ರೆಗಳಲ್ಲಿ ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿ ಹಣ ಕೊಟ್ಟವರಿಗೆ ಒಂದು ರೀತಿ ಟ್ರೀಟ್ಮೆಂಟ್, ಹಣ ಕೊಡದವರಿಗೆ ಮತ್ತೊಂದು ರೀತಿ ಚಿಕಿತ್ಸೆ ನೀಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕ್ವಾರಂಟೈನ್ ಕೇಂದ್ರದಲ್ಲಿ ಮೋಸ ನಡೆಯುತ್ತಿದೆ ಎಂದು ಆರೋಪಿಸಿದ ಜಿ.ಪಂ ಸದಸ್ಯೆ ಕೊರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರದಲ್ಲಿ ಹಣ ವಸೂಲಿ ದಂಧೆ ನಡೆದಿದೆ ಎಂದು ಗದಗ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಮಾಡಿದ್ದಾರೆ. ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಆರೋಪ ಮಾಡಿರುವ ಸದಸ್ಯೆ ಶಕುಂತಲಾ ಮೂಲಿಮನಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲೆಯ ಕೋವಿಡ್-19 ಆಸ್ಪತ್ರೆ ಹಾಗೂ ಕ್ವಾರಂಟೈನ್ನಲ್ಲಿ ಇರುವ ಜನರಿಗೆ ಮೋಸ ಮಾಡಲಾಗುತ್ತಿದೆ. ಅಲ್ಲಿನ ಜನರ ಸ್ಥಿತಿ ಕರುಣಾಜನಕವಾಗಿದೆ. ಒಮ್ಮೆ ನೀವೂ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಿಗೆ ಹೋಗಿ ನೋಡಿ ಸತ್ಯದ ದರ್ಶನ ಆಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇದರಿಂದ ಬಡ ಜನರಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಊಟ, ಉಪಹಾರ ಸಿಗುತ್ತಿಲ್ಲ. ಹೀಗೆಂದು ನಾನೇನು ಅಲ್ಲಿಗೆ ಹೋಗಿ ಬಂದು ಹೇಳುತ್ತಿಲ್ಲ. ಅಲ್ಲಿ ಅನುಭವಿಸಿ ಬಂದವರು ನಮ್ಮ ಎದುರು ಗೋಳು ತೋಡಿಕೊಂಡಿರೋದನ್ನು ನಿಮ್ಮೆದುರಿಗೆ ಹೇಳುತ್ತಿದ್ದೇನೆ ಅಂತಾ ಕಳವಳ ವ್ಯಕ್ತಪಡಿಸಿದ್ದಾರೆ.
ಇಂತಹ ಕೊರೊನಾ ಸಂಕಷ್ಟದಲ್ಲಿ ಬಡ ಜನರಿಗೆ ಹೀಗಾದ್ರೆ ಹೇಗೆ, ಅಂತ ಪ್ರಶ್ನೆ ಮಾಡಿರುವ ಜಿಲ್ಲಾ ಪಂಚಾಯತ್ ಸದಸ್ಯೆ ಶಕುಂತಲಾ ಮೂಲಿಮನಿ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.