ಗದಗ: ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಎರಡು ಸಮುದಾಯದ ನಡುವೆ ಗಲಾಟೆ ನಡೆದಿರುವ ಘಟನೆ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ನಡೆದಿದೆ.
ಬಳಗಾನೂರ ಗ್ರಾಮದ ಬಸ್ ನಿಲ್ದಾಣದ ಬಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಎಂದು ಹಾಲುಮತ ಕುರುಬ ಸಮಾಜದವರು ಪಟ್ಟು ಹಿಡಿದರೆ, ಅದೇ ಜಾಗದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು ಅನ್ನೋದು ಪಂಚಮಸಾಲಿ ಸಮುದಾಯವರ ಒತ್ತಾಯವಾಗಿತ್ತು.
ಮೂರ್ತಿ ಪ್ರತಿಷ್ಠಾಪನೆ ಪ್ರತಿಷ್ಠೆ ಗಲಾಟೆ ಈ ವಿಚಾರವಾಗಿ ಕಳೆದ ನಾಲ್ಕೈದು ವರ್ಷಗಳಿಂದ ಈ ಎರಡು ಸಮುದಾಯಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಈ ಹಿಂದೆ ಹಾಕಿದ್ದ ರಾಣಿ ಚೆನ್ನಮ್ಮ ನಾಮಫಲಕವನ್ನು ತೆರವುಗೊಳಿಸಲಾಗಿತ್ತು. ಈಗ ರಾತ್ರೋರಾತ್ರಿ ಸ್ಥಾಪಿತಗೊಂಡ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನೂ ತೆರವುಗೊಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಯಣ್ಣ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ. ಇದರಿಂದ ರೋಸಿಹೋದ ಕೆಲ ಕಿಡಿಗೇಡಿಗಳು ಗದಗ ಎಸಿ ರಾಯಪ್ಪ ಹಾಗೂ ಡಿವೈಎಸ್ಪಿ ಪ್ರಹ್ಲಾದ್ ಅವರ ವಾಹನಕ್ಕೆ ಕಲ್ಲು ತೂರಿ ವಾಹನ ಧ್ವಂಸಗೊಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಎರಡು ಸಮುದಾಯದ ಹತ್ತಾರು ಜನರ ಬಂಧನ ಮಾಡಲಾಗಿದೆ. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನೊಂದೆಡೆ, ಘಟನೆಗೆ ಸಚಿವ ಸಿ.ಸಿ ಪಾಟೀಲ್ ಕಾರಣ ಎಂಬುದು ರಾಯಣ್ಣ ಬ್ರಿಗೇಡ್ ಸಂಘಟನೆಯವರ ಆರೋಪವಾಗಿದೆ. ಸಿ.ಸಿ.ಪಾಟೀಲ್ ಒಂದು ಸಮುದಾಯಕ್ಕೆ ಮಾತ್ರ ಪ್ರೋತ್ಸಾಹಿಸಿ ಅಧಿಕಾರಿಗಳನ್ನು ಬಳಸಿಕೊಂಡು ಸಂಗೊಳ್ಳಿ ರಾಯಣ್ಣ ಮೂರ್ತಿ ತೆರವುಗೊಳಿಸಿದ್ದಾರೆ ಎಂಬ ಆರೋಪ ರಾಯಣ್ಣ ಬ್ರಿಗೇಡ್ ಯುವಕರದ್ದು.
ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಮುಂದಾಗಿದ್ದಾರೆ. ಸದ್ಯ ಗ್ರಾಮದ ವಾತಾವರಣ ಬೂದಿಮುಚ್ಚಿದ ಕೆಂಡದಂತಿದೆ.