ಗಂಗಾವತಿ:ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ನೇತೃತ್ವದಲ್ಲಿ ನಗರದ ವಿವಿಧೆಡೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಒಟ್ಟು 12 ಲಕ್ಷ ರೂ. ಮೌಲ್ಯದ 1.497 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ದಾಸನಾಳದಲ್ಲಿರುವ ಮಂಜುನಾಥ ರೈಸ್ ಮಿಲ್, ಉಮಾ ಶಂಕರ್ ಆಗ್ರೋ ಫುಡ್, ಶರಣ ಬಸವೇಶ್ವರ ಕ್ಯಾಂಪ್ನಲ್ಲಿರುವ ವ್ಯಕ್ತಿ ಮನೆ ಹಾಗೂ ನಗರದ ನಾನಾ ಗೋದಾಮು, ಖಾಸಗಿ ಸಂಗ್ರಹಣ ಸ್ಥಳದ ಮೇಲೆ ದಾಳಿ ಮಾಡಿದ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.
1.497 ಕ್ವಿಂಟಾಲ್ ಪಡಿತರ ಅಕ್ಕಿ ಜಪ್ತಿ ಈ ಸಂಬಂಧ ನಗರದ ಉದ್ಯಮಿಗಳಾದ ಸುರೇಶ್, ಉಮೇಶ್, ಕಾಳಪ್ಪ, ಸಿದ್ದಣ್ಣ, ಮಲ್ಲಿಕಾರ್ಜುನ್, ಲಾರಿ ಚಾಲಕ ಮೈನುದ್ದೀನ್, ಖಾಸಗಿ ವ್ಯಕ್ತಿಗಳಾದ ಮಾಲನಿ, ಹುಸೇನಫೀರಾ, ಭಾಷಾಸಾಬ್, ಮೊಹಮ್ಮದ್ ಮನಿಯಾರ್ ಹಾಗೂ ನಾಗರಾಜ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಗ್ರಾಮೀಣ ಠಾಣೆಯಲ್ಲಿ ಒಟ್ಟು ಮೂರು ಪ್ರಕರಣ ಹಾಗೂ ನಗರ ಠಾಣೆಯಲ್ಲಿ ನಾಲ್ಕು ಪ್ರಕರಣ ದಾಖಲಾಗಿವೆ. ಆಹಾರ ಇಲಾಖೆ ಶಿರಸ್ತೇದಾರ ದೇವರಾಜ್ ಎರಡು, ಆಹಾರ ನಿರೀಕ್ಷಕ ಎಚ್.ಐ. ಬಾಗಲಿ ಎರಡು ಹಾಗೂ ನಗರ ವೃತ್ತದ ಆಹಾರ ನಿರೀಕ್ಷಕಿ ನಂದಾ ಪಿ. ಪಲ್ಲೇದ ನಗರ ಠಾಣೆಯಲ್ಲಿ ಮೂರು ದೂರು ದಾಖಲಿಸಿದ್ದಾರೆ.
ಅಕ್ಕಿ ಸಾಗಾಣಿಕೆಗೆಂದು ಬಳಸಲಾಗುತ್ತಿದ್ದ ನಾಲ್ಕು ಲಾರಿ ವಶಕ್ಕೆ ಪಡೆದ ಅಧಿಕಾರಿಗಳು ಲಾರಿ ಮಾಲೀಕ ಮತ್ತು ಚಾಲಕರ ಮೇಲೂ ದೂರು ದಾಖಲಿಸಿದ್ದಾರೆ.
ವಶಕ್ಕೆ ಪಡೆದ ಅಕ್ಕಿಯನ್ನ ಜಪ್ತಿ ಮಾಡಿ ಕೆಎಸ್ಎಫ್ಸಿಐನ ಗೋದಾಮಿನಲ್ಲಿ ಇರಿಸಲಾಗಿದೆ. ಪಡಿತರ ಚೀಟಿ ವ್ಯವಸ್ಥೆಯಡಿ ಬಡ ಫಲಾನುಭವಿಗಳಿಗೆ ಸರ್ಕಾರ ನೀಡುತ್ತಿದ್ದ ಈ ಅಕ್ಕಿಯನ್ನು ಆರೋಪಿಗಳು ಸಂಗ್ರಹಿಸುತ್ತಿದ್ದರು. ಆ ಅಕ್ಕಿಯನ್ನು ಪಾಲೀಶ್ ಮಾಡಿ ನಾನಾ ಬ್ರಾಂಡಿನಲ್ಲಿ ರೀ ಪ್ಯಾಕ್ ಮಾಡಿ ಮಾರುಕಟ್ಟೆಗೆ ಸಾಗಿಸಲಾಗುತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.