ಗದಗ: ಜಾತ್ರೆ ಅಂದ್ರೆ ರಥೋತ್ಸವ, ಪಲ್ಲಕ್ಕಿ ಉತ್ಸವ ಸಾಮಾನ್ಯ. ಆದ್ರೆ ಈ ಜಾತ್ರೆ ಮಾತ್ರ ಫುಲ್ ಡಿಫರೆಂಟ್. ಇಲ್ಲಿ ಬರೀ ರೊಟ್ಟಿಯದ್ದೇ ಕಾರಬಾರು. ಈ ರೊಟ್ಟಿಯ ಜಾತ್ರೆಯಲ್ಲಿ ಭಾವೈಕ್ಯತೆಯ ರುಚಿ ಇದೆ. ಕೋಮು ಸೌಹಾರ್ದತೆಯ ಸಂಕೇತವಾಗಿದೆ.
ಹೌದು, ಇದು ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳದ ತೋಂಟದಾರ್ಯ ಮಠದ ಜಾತ್ರೆಯ ಝಲಕ್. ಡಂಬಳ ಗ್ರಾಮದ ತೋಂಟದ ಎಡೆಯೂರು ಸಿದ್ಧಲಿಂಗೇಶ್ವರರ ರೊಟ್ಟಿ ಜಾತ್ರೆ ಈ ಭಾಗದಲ್ಲಿ ಭಾರಿ ಫೇಮಸ್.ಸಮಾಜದಲ್ಲಿ ಜಾತಿ ಜಾತಿ ಅಂತ ಕೋಮು ದಳ್ಳುರಿಯಲ್ಲಿ ಬೆಂದು ಹೋಗುವವರು ಸಾಕಷ್ಟು ಜನರಿದ್ದಾರೆ. ಆದರೆ ಈ ಮಠ ಮಾತ್ರ ಸದ್ದಿಲ್ಲದೆ ಡಂಬಳ ಗ್ರಾಮದ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ಜಾತ್ರೆಯಲ್ಲಿ ರೊಟ್ಟಿಯದ್ದೇ ಪ್ರಮುಖ ಪಾತ್ರ. ಈ ರೊಟ್ಟಿ ಜಾತ್ರೆಯಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿಯನ್ನು ಜಾತಿ ಮತ ಭೇದವಿಲ್ಲದೆ ಎಲ್ಲಾ ಜಾತಿ ಧರ್ಮದ ಜನರು ತಮ್ಮ ತಮ್ಮ ಮನೆಯಲ್ಲಿ ಮಾಡಿಕೊಂಡು ಮಠಕ್ಕೆ ನೀಡಿ, ಸಾಮೂಹಿಕ ಭೋಜನ ಮಾಡ್ತಾರೆ.