ಗದಗ: ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಅವರು ನಾಮಪತ್ರ ಸಲ್ಲಿಕೆ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಅವರ ಕಾರಿಗೆ ಕಲ್ಲೆಸೆದ ಘಟನೆ ನಡೆದಿದೆ. ನಗರದ ಎಸಿ ಕಚೇರಿ ಬಳಿ ನಡೆದ ದುಷ್ಕೃತ್ಯ ಖಂಡಿಸಿ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಮತ್ತೊಂದೆಡೆ, ಕಾಂಗ್ರೆಸ್ ಅಭ್ಯರ್ಥಿ ಹಿರಿಯ ನಾಯಕ ಹೆಚ್.ಕೆ.ಪಾಟೀಲ್ ಅವರಿಂದು ತಮ್ಮ ಪಕ್ಷದ ಸಾವಿರಾರು ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಮಾಜಿ ಶಾಸಕ ಡಿ.ಆರ್.ಪಾಟೀಲ್ ಸೇರಿದಂತೆ ಹಲವು ಮುಖಂಡರು ಅವರಿಗೆ ಸಾಥ್ ಕೊಟ್ಟರು. ನಾಮಪತ್ರ ಸಲ್ಲಿಕೆಗೂ ಮುನ್ನ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, "ಜಗದೀಶ್ ಶೆಟ್ಟರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ರಾಜ್ಯದ ಹಿರಿಯ, ಉತ್ತರ ಕರ್ನಾಟಕದ ಕ್ರಿಯಾಶೀಲ ನಾಯಕರು. ಸೌಮ್ಯ ಹಾಗೂ ಸಜ್ಜನಿಕೆಯ ನಡವಳಿಕೆ ಇಟ್ಟುಕೊಂಡವರು" ಎಂದು ಹೇಳಿದರು
ಶೆಟ್ಟರ್ ಅವರನ್ನು ರಾಜಕೀಯವಾಗಿ ಮುಗಿಸುವ ಪ್ರವೃತ್ತಿ ಯಾರದ್ದೇ ಇರಲಿ, ಅದು ಖಂಡನೀಯ. ಅವರು ಕಾಂಗ್ರೆಸ್ ಸೇರಿದ್ದು ಬಹಳ ಸಂತೋಷ ತಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಪಕ್ಷ ಸೇರುವ ವೇಳೆ ಯಾವುದೇ ಡಿಮ್ಯಾಂಡ್ ಇಟ್ಟಿಲ್ಲ. ಯಾವುದೇ ಕರಾರು, ಬೇಡಿಕೆಗಳನ್ನೂ ಸಹ ವ್ಯಕ್ತಪಡಿಸಿಲ್ಲ. ತತ್ವ ಸಿದ್ದಾಂತ ಹಾಗೂ ಅವರಿಗಾದ ಅನ್ಯಾಯದ ವಿರುದ್ಧ ಹೆಜ್ಜೆ ಇಟ್ಟಿದ್ದಾರೆ. ಬಿಜೆಪಿಯವರ ನಡವಳಿಕೆ ಎಷ್ಟು ಕೆಟ್ಟದಿದೆ ಅನ್ನೋದನ್ನು ಜನರು ಇಂದು ಊಹಿಸುತ್ತಿದ್ದಾರೆ. ಅದೇ ಮಾತುಗಳನ್ನು ಸವದಿ ಹೇಳ್ತಿದ್ದಾರೆ. ಅಲ್ಲದೇ, ಈಶ್ವರಪ್ಪನವರ ಆಕ್ರೋಶ ಹಾಗೂ ಸಂಸದ ಸಂಗಣ್ಣ ಕರಡಿ ಮಾತು ಬಿಜೆಪಿಯಲ್ಲಿ ಏನು ನಡೆದಿದೆ ಎನ್ನುವುದು ಸ್ಪಷ್ಟವಾಗುತ್ತೆ ಎಂದರು.