ಕರ್ನಾಟಕ

karnataka

ETV Bharat / state

ಚುನಾವಣಾ ಪ್ರಣಾಳಿಕೆಯಲ್ಲಿ ಹೇಳುವಾಗ ಜ್ಞಾನ ಇರಲಿಲ್ಲವಾ?: ಕಾಂಗ್ರೆಸ್ ವಿರುದ್ಧ ಈಶ್ವರಪ್ಪ ಕಿಡಿ ..ಕಿಡಿ!​ - ಗದಗ

Congress guarantee scheme- ಬೋಗಸ್ ಪ್ರಣಾಳಿಕೆ ಘೋಷಣೆ ಮಾಡುವಾಗ ಯೋಚನೆ ಮಾಡಬೇಕಿತ್ತು-ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ವಾಗ್ದಾಳಿ.

KS Eshwarappa lashes out at Congress
ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ

By

Published : Jun 24, 2023, 10:59 AM IST

Updated : Jun 24, 2023, 11:14 AM IST

ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ವಾಗ್ದಾಳಿ

ಗದಗ:ಕೇಂದ್ರ ಬಿಜೆಪಿ ಸರ್ಕಾರ ಬಡವರಿಗೆ ಅಕ್ಕಿ ಕೊಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಚುನಾವಣಾ ಪ್ರಣಾಳಿಕೆಯಲ್ಲಿ ಬರೆಯುವಾಗ ಕಾಂಗ್ರೆಸ್​​ನವರಿಗೆ ಮೈಮೇಲೆ ಜ್ಞಾನವಿರಲಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಆಕಸ್ಮಾತ್ ಘೋಷಣೆ ಮಾಡಿದ್ದರೂ ಯಾರನ್ನ ಕೇಳಿ ಇವರು ಘೋಷಣೆ ಮಾಡ್ತಾರೆ?. ತಮಗೆ ಖುಷಿ ಬಂದ ಹಾಗೆ ಘೋಷಣೆ ಮಾಡೋದಾ?, ಕೇಂದ್ರ ಸರ್ಕಾರಕ್ಕೆ ಕೇಳಿದ್ರಾ?, ನರೇಂದ್ರ ಮೋದಿ ಅವರನ್ನು ಕೇಳಿದ್ರಾ? ಜನರನ್ನ ಮರಳು‌ ಮಾಡೋಕೆ ಎಲ್ಲ ಪ್ರಯತ್ನ ನಡೆಸಿದರು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು "ಆ‌ ಮೋಸ ತಾತ್ಕಾಲಿಕವಾಗಿ ಯಶಸ್ವಿಯಾಗಿದೆ. 5 ಕೆ.ಜಿ ಅಕ್ಕಿಯನ್ನು ಮೊದಲಿನಿಂದಲೂ ನರೇಂದ್ರ ಮೋದಿ ಅವರ ನಾಯಕತ್ವದ ಕೇಂದ್ರ ಸರ್ಕಾರ ಕೊಡುತ್ತಾ ಬಂದಿದೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಒಮ್ಮೆಯಾದ್ರೂ ಹೇಳಿದ್ರಾ?. ಕೇಂದ್ರದ ಅಕ್ಕಿಯನ್ನೂ ಸಹ ತಮ್ಮದೇ ಅಂತ 'ಅನ್ನರಾಮಯ್ಯ' ಹೆಸರು ಇಟ್ಟಕೊಂಡರು. ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ಕೊಡ್ತೇವೆ ಅಂದಿದ್ರು. ಒಬ್ಬರೇ ಒಬ್ಬರಿಗಾದ್ರು ಕೊಟ್ಟಿದ್ದಾರಾ? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು.

ಇದನ್ನೂ ಓದಿ:ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ- ಅಮಿತ್‌ ಶಾ ಭೇಟಿ: ಅಕ್ಕಿ ಸಮಸ್ಯೆ ಸೇರಿದಂತೆ ಹಲವು ವಿಚಾರಗಳ ಚರ್ಚೆ

ಸಿಎಂ, ಡಿಸಿಎಂ ಇಬ್ಬರೂ ಸುಳ್ಳರು:200 ಯುನಿಟ್ ವಿದ್ಯುತ್​ ಉಚಿತ ಎಂದು ಹೇಳಿದರು. ನಿನಗೂ ಫ್ರೀ ನನಗೂ ಫ್ರೀ ಅಂದ್ರು. ಈಗ ಫ್ರೀ ಕೊಡೋದಿರಲಿ, ಒಂದಕ್ಕೆ ಡಬಲ್ ಬಿಲ್ ಮಾಡಿದ್ದಾರೆ. ವಿದ್ಯುತ್ ಬಿಲ್​ ಹೆಚ್ಚಳದಿಂದ ಎಲ್ಲ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಪ್ರತಿ ಮನೆ ಹೆಣ್ಮಕ್ಕಳಿಗೂ 2 ಸಾವಿರ ರೂ. ಕೊಡ್ತೇವಿ ಎಂದರು. ಈಗ ಸರ್ವರ್ ಹ್ಯಾಕ್ ಆಗಿದೆ ಅಂತಾ ಸುಳ್ಳು ಹೇಳಿ ರಾಜಕಾರಣಕ್ಕಾಗಿ ಹೇಳಿದ್ವಿ ಅಂತ ಸ್ಪಷ್ಟವಾಗಿ ಹೇಳ್ತಿದ್ದಾರೆ. ಮೋಸ ಮಾಡಿದ ಇಬ್ಬರೂ ಸುಳ್ಳರೇ ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ವಿರುದ್ಧ ಕಿಡಿ ಕಾರಿದರು.

ಸಿದ್ದು- ಡಿಕೆಶಿ ಇಬ್ಬರೂ ಸಿಗ್ನೇಚರ್ ಮಾಡಿಕೊಟ್ಟಿದ್ದೇ ಮಾಡಿಕೊಟ್ಟಿದ್ದು. ಜನ ನಂಬಿದ್ರು. ಆದರೆ ಈ ಮೋಸದ ಗುಂಡಿಗೆ ಜನ ಪರ್ಮನೆಂಟ್ ಆಗಿ ಬೀಳಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋಸ‌ ಮಾಡಿದವರಿಗೆ ಸರಿಯಾದ ಉತ್ತರವನ್ನು ಜನ ಕೊಡ್ತಾರೆ. ಇಡೀ ದೇಶಕ್ಕೆ ಕೊಡೋ ಅಕ್ಕಿಯನ್ನ ನನಗೆ ಒಬ್ಬನಿಗೆ ಕೊಡು ಅಂದ್ರೆ ಹೇಗೆ ಆಗುತ್ತೆ?. ಬೋಗಸ್ ಪ್ರಣಾಳಿಕೆ ಘೋಷಣೆ ಮಾಡುವಾಗ ಯೋಚನೆ ಮಾಡಬೇಕಿತ್ತು. ರಾಜ್ಯದ ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರವೇ ಕಾರಣ. ಹ್ಯಾಕ್ ಆಗಿದ್ದಕ್ಕೂ ಕೇಂದ್ರ ಸರ್ಕಾರ, ಅಕ್ಕಿ ಸಿಗದೇ ಇರೋದಕ್ಕೂ ಕೇಂದ್ರ ಕಾರಣ, ಬೋಗಸ್ ಗ್ಯಾರಂಟಿಗಳಿಗೆಲ್ಲ ಕೇಂದ್ರ ಕಾರಣ ಅಂತಾ ಕೇಂದ್ರದ ಮೇಲೆ ಹಾಕ್ತಿದ್ದೀರಲ್ಲ, ಇದನ್ನ ಯಾರು ನಂಬ್ತಾರೆ?. ಬೋಗಸ್ ಸರ್ಕಾರ ಇದು ಎಂದು ಈಶ್ವರಪ್ಪ ದೂರಿದರು.

ಇದನ್ನೂ ಓದಿ:ಹೆಚ್ಚುವರಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರದಿಂದ ಅಕ್ಕಿ ನಿರಾಕರಣೆ: ಸಚಿವ ಕೆ.ಹೆಚ್. ಮುನಿಯಪ್ಪ

Last Updated : Jun 24, 2023, 11:14 AM IST

ABOUT THE AUTHOR

...view details