ಗದಗ : ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ಹೆಚ್.ಕೆ.ಪಾಟೀಲ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಳುತ್ತೇನೆ ಅಂತ ಜೆಡಿಎಸ್ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಜಿಂದಾಲ್ಗೆ ಭೂಮಿ ಕೊಡುವುದು ಸರಿಯಲ್ಲ. ಈ ಬಗ್ಗೆ ಶಾಸಕ ಹೆಚ್.ಕೆ.ಪಾಟೀಲ್ ಅವರ ಅಭಿಪ್ರಾಯ ಸರಿ ಇದೆ. ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯನ್ನು ಜಿಂದಾಲ್ಗೆ ಕೊಡಬಾರದು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಇನ್ನು ಎಲ್ಲಾ ಶಾಸಕರಿಗೂ ಮಂತ್ರಿಯಾಗುವ ವಿಚಾರದ ಕುರಿತು ಮಾತನಾಡಿ, ಶಾಸಕರಾದ ಎಲ್ಲರೂ ಮಂತ್ರಿಯಾಗುವ ಆಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ನನ್ನಂತವರು ಮಂತ್ರಿ ಆಗುವ ಕಾಲ ಇದಲ್ಲ. ನಾನು ತತ್ವ-ಸಿದ್ಧಾಂತದ ಮೇಲೆ ರಾಜಕಾರಣ ಮಾಡಿದವನು.
ಈ ಹಿಂದೆ ಶಾಸಕರನ್ನು ಕರೆದು ಮಂತ್ರಿ ಮಾಡುತ್ತಿದ್ದರು. ಈಗ ಯಾರನ್ನು ಮಂತ್ರಿ ಮಾಡಬೇಕು ಎನ್ನುವುದು ಮುಖಂಡರಿಗೆ ತಿಳಿಯದಂತಾಗಿದೆ. ಶಾಸಕರಾದವರು ಮಂತ್ರಿಯಾಗಿಯೇ ಕೆಲಸ ಮಾಡಬೇಕೆಂದು ಆಸೆ ಪಡುವುದು ತಪ್ಪು. ಜನ ಅಧಿಕಾರ ಕೊಟ್ಟಿದ್ದಾರೆ. ಶಾಸಕರಾಗಿ ಸರ್ಕಾರದ ಕೆಲಸವನ್ನು ಮಾಡಿ ಎಂದು ಕಿವಿಮಾತು ಹೇಳಿದರು.
ಇನ್ನು ರಾಜ್ಯದಲ್ಲಿ ಆಪರೇಷನ್ ಕಮಲ ನಡೆದರೆ ರಾಜೀನಾಮೆ ಕೊಟ್ಟು ಚುನಾವಣೆ ಎದರಿಸುವ ಪಕ್ಷಾಂತರಿಗಳು ಯಾವುದೇ ಕಾರಣಕ್ಕೆ ಮತ್ತೆ ಗೆಲ್ಲುವುದಿಲ್ಲ. ರಾಜ್ಯದಲ್ಲಿ ಯಾವುದೇ ಪಕ್ಷದವರು ಚುನಾವಣೆ ಎದುರಿಸುವ ಸ್ಥಿತಿಯಲ್ಲಿ ಇಲ್ಲ ಎಂದರು. ರಾಜ್ಯದ ಮತದಾರ ಎಷ್ಟು ಪ್ರಬುದ್ಧರಿದ್ದಾರೆ ಅಂತ ಈಗಷ್ಟೇ ನಡೆದ ಎರಡು ಚುನಾವಣೆಗಳಲ್ಲಿ ಗೊತ್ತಾಗಿದೆ ಅಂದ್ರು.