ಗದಗ: ತನ್ನ ಮೂರು ವರ್ಷದ ಮಗಳನ್ನು ಪಾಪಿ ತಂದೆಯೊಬ್ಬ ಕೊಲೆ ಮಾಡಿರುವ ಘಟನೆ ಗದಗನಲ್ಲಿ ನಡೆದಿದೆ.
ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದ ಗಣೇಶ ಬೂದಪ್ಪ ಮಡಿವಾಳರ(33) ಎಂಬಾತ ಮೂರ್ಛೆ ಕಾಯಿಲೆಯಿಂದ ಬಳಲುತ್ತಿದ್ದ ಭುವನೇಶ್ವರಿ ಎಂಬ ತನ್ನ ಮೂರು ವರ್ಷದ ಕಂದಮ್ಮನನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ.
ಕಳೆದ ಜನವರಿ 11ರಂದು ಜಿಲ್ಲಾಸ್ಪತ್ರೆಯಿಂದ ಆಟೋದಲ್ಲಿ ನಗರದ ಹೆರಿಗೆ ಆಸ್ಪತ್ರೆಗೆ ಕರೆದುಕೊಂಡು ಬರುವ ಮಾರ್ಗ ಮಧ್ಯೆ ಇರುವ ಮಲ್ಲಸಮುದ್ರ ಕ್ರಾಸ್ ಬಳಿ ಭುವನೇಶ್ವರಿ ಕುತ್ತಿಗೆಯಲ್ಲಿ ಕಟ್ಟಿದ್ದ ದಾರದಿಂದ ಕೊಲೆ ಮಾಡಿದ್ದಾನೆ.
ಆರೋಪಿ ಗಣೇಶ, ಹುಲಕೋಟಿಯ ಆರ್‌ಎಂಎಸ್ ಆಸ್ಪತ್ರೆಯಲ್ಲಿ ಮಗಳ ಪಿಟ್ಸ್ ಕಾಯಿಲೆಗೆ ಸಾಕಷ್ಟು ಹಣ ಖರ್ಚು ಮಾಡಿದ್ದ. ಇವಳಿಗೆ ಹೀಗೆ ಖರ್ಚು ಮಾಡಿ ಚಿಕಿತ್ಸೆ ಕೊಡಿಸುತ್ತಾ ಹೋದರೆ, ಹೊಲ, ಮನೆ ಮಾರಬೇಕಾಗುತ್ತದೆ ಎಂದು ತಿಳಿದು ಉಸಿರುಗಟ್ಟಿಸಿದ್ದಾನೆ. ಜನವರಿ 11ರಂದು ಭುವನೇಶ್ವರಿ ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ಇದ್ದಾಗ ಇವಳಿಗೆ ಪಿಟ್ಸ್ ಬಂದಿದೆ. ಆಗ ಅಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿಗೆ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯಂತೆ ಮಗಳನ್ನು ಗದಗ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ.