ಗದಗ:ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ ಅಂದ್ರೆ ಅಸಮಾಧಾನಗೊಂಡು ಆಕ್ರೋಶಗೊಂಡು ಬೆಳೆ ನಾಶ ಮಾಡಲು ಅಥವಾ ರಸ್ತೆಗೆ ಸುರಿಯಲು ಮುಂದಾಗ್ತಾರೆ. ಆದ್ರೆ ಇಲ್ಲೊಬ್ಬ ರೈತ ತಾನು ಬೆಳೆದಿದ್ದ ಬಾಳೆಗೆ ಬೆಲೆ ಸಿಗದಿದ್ರೂ ಬೆಳೆ ಹೊಲದಲ್ಲೇ ಕೊಳೆತು ಹೋಗ್ಬಾರ್ದು ಎಂದು ಬಾಳೆಯನ್ನು ಹಣ್ಣು ಮಾಡಿ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಣೆ ಮಾಡ್ತಿದ್ದಾರೆ.
ಬೆಲೆ ಸಿಗದೇ ಶಾಲಾ ಮಕ್ಕಳಿಗೆ ಉಚಿತ ಬಾಳೆಹಣ್ಣು ವಿತರಣೆ: ಸಂಕಷ್ಟದಲ್ಲೂ ರೈತನ ಮಾನವೀಯ ಗುಣ
ಬಾಳೆಹಣ್ಣು ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರೆಯದ ಕಾರಣ ರೈತರೊಬ್ಬರು ಬಾಳೆಹಣ್ಣುಗಳನ್ನು ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ನೀಡುತ್ತಿದ್ದಾರೆ.
ಗದಗ ತಾಲೂಕಿನ ಅಸುಂಡಿ ಗ್ರಾಮದ ರೈತ ವೆಂಕರೆಡ್ಡಿ ನೆಲೂಡಿ ಎಂಬುವರು ತಮ್ಮ ಎರಡು ಎಕರೆ ಜಮೀನನಲ್ಲಿ ಬಾಳೆ ಬೆಳೆದಿದ್ದರು. ಆದರೆ ಬಾಳೆಗೆ ನಿರೀಕ್ಷಿತ ಬೆಲೆ ಸಿಗಲಿಲ್ಲ. ಬೇರೆ ರೈತರೆಲ್ಲಾ ಗೊನೆ ಕಡಿದು ಹಣ್ಣು ಮಾಡದೇ ಬೇಜಾರಾಗಿ ಹಾಗೆಯೇ ಹೊಲದಲ್ಲೇ ಕೊಳೆಯಲೆಂದು ಸುಮ್ಮನಾದರು. ಆದರೆ ವೆಂಕರೆಡ್ಡಿ ಮಾತ್ರ ಹಾಗೆ ಮಾಡಿಲ್ಲ, ಬಡಮಕ್ಕಳ ಹೊಟ್ಟೆ ತುಂಬಲೆಂದು ತಮ್ಮೂರ ಸುತ್ತಮುತ್ತಲಿಗೆ ಶಾಲೆಗಳು, ಮಠಗಳಿಗೆ ಬಡವರಿಗೆ ಹಂಚುತ್ತಿದ್ದಾರೆ.
ವೆಂಕರೆಡ್ಡಿ ನೆಲೂಡಿ ಅವರು ತನ್ನ ಒಂದೆಕರೆ ಜಮೀನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಸುಮಾರು 2.5 ಎಕರೆ ಜಮೀನಿನಲ್ಲಿ ಬಾಳೆ ಬೆಳೆದಿದ್ದರು. ಬಾಳೆಯೂ ಸಮೃದ್ಧವಾಗಿ ಬೆಳೆದಿತ್ತು. ಆದರೆ ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿದಿದೆ. ಕೆಜಿಗೆ ಕೇವಲ 2-3 ರೂ. ಗೆ ಕೇಳ್ತಿದ್ದಾರೆ. ಇದರಿಂದ ಈ ಬಾಳೆಗೊನೆಯನ್ನು ಮಾರಾಟಕ್ಕೆ ತರುವ ಗಾಡಿಯ ಬಾಡಿಗೆಗೂ ಸಾಕಾಗೋದಿಲ್ಲ. ಈ ಹಿನ್ನೆಲೆಯಲ್ಲಿ ಇವರು ಹಣ್ಣುಗಳನ್ನು ಶಾಲಾ ಮಕ್ಕಳಿಗೆ ಮಠಗಳು, ಬಡವರಿಗೆ ಉಚಿತವಾಗಿ ನೀಡುವ ಕಾರ್ಯ ಮಾಡ್ತಿದ್ದಾರೆ.