ಗದಗ:ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ನಿಯಂತ್ರಿಸಲು ಜುಲೈ 27ರ ವರೆಗೆ ವಿಧಿಸಲಾಗಿದ್ದ ನಿಷೇಧಾಜ್ಞೆಯನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಗದಗನಲ್ಲಿ ವಿಧಿಸಲಾದ ನಿಷೇಧಾಜ್ಞೆ ಹಿಂಪಡೆದ ಜಿಲ್ಲಾಡಳಿತ
ಮಹಾಮಾರಿ ಕೊರೊನಾ ಸೋಂಕು ತಡೆಗಟ್ಟಲು ಲಾಕ್ಡೌನ್ ವಿಸ್ತರಣೆ ಮಾಡಲಾಗಿತ್ತು. ಆದರೆ, ಸಿಎಂ ಅನ್ ಲಾಕ್ ಆದೇಶ ಹೊರಡಿಸಿದ್ದು, ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ಹಿಂಪಡೆದು ಆದೇಶ ಹೊರಡಿಸಿದ್ದಾರೆ.
ಕೊರೊನಾ ಸೋಂಕು ವ್ಯಾಪಿಸಿರುವ ಪ್ರದೇಶಗಳಲ್ಲಿ ಹಾಗೂ ಸೀಲ್‍ಡೌನ್ ಘೋಷಿಸಲ್ಪಟ್ಟಿರುವ ವಲಯಗಳಲ್ಲಿ ಮಾತ್ರ ನಿರ್ಬಂಧ ಮುಂದುವರೆಯಲಿದೆ. ಉಳಿದಂತೆ ಜನಜೀವನ, ಸಾರಿಗೆ ಸಂಚಾರ, ವಾಣಿಜ್ಯ - ವ್ಯವಹಾರ ಚಟುವಟಿಕೆಗಳು ಎಂದಿನಂತೆ ನಡೆಯಲಿವೆ ಎಂದರು.
ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಸೇರಿದಂತೆ ಮುಂತಾದ ಮುಂಜಾಗೃತಾ ಕ್ರಮಗಳನ್ನು ಪಾಲಿಸಬೇಕು. ಈ ಹಿಂದೆ ವಿಧಿಸಲಾಗಿದ್ದ ನಿತ್ಯ ರಾತ್ರಿ 8 ರಿಂದ ಬೆಳಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮಾರ್ಪಡಿಸಿ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ನಿಗದಿಪಡಿಸಿದೆ. ಭಾನುವಾರದ ಸಂಪೂರ್ಣ ನಿಷೇಧಾಜ್ಞೆ ಯಥಾಪ್ರಕಾರ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ಸೂಚಿಸಿದ್ದಾರೆ.