ಗದಗ :ಜನ ಮೂಲ ಸೌಲಭ್ಯಗಳನ್ನು ನೀಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಜಗತ್ತಿನ ಯಾವುದೇ ಶಕ್ತಿ ಬಂದರೂ ಜನರಿಗೆ ಕುಡಿಯುವ ನೀರು ನೀಡುವುದನ್ನು ತಡೆಯಲು ಸಾಧ್ಯವಿಲ್ಲ. ಜನಶಕ್ತಿ ಮುಂದೆ ಯಾವ ಶಕ್ತಿಯೂ ನಿಲ್ಲಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಇಂದು ರೋಣ ತಾಲೂಕಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಮತ್ತು ರೋಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಗದಗ ಜಿಲ್ಲೆಯ ಮೂರು ಪ್ರಮುಖ ನಗರಗಳಾದ ರೋಣ, ಗಜೇಂದ್ರಗಡ ಹಾಗೂ ನರೇಗಲ್ಗೆ ಫ್ಲೋರೈಡ್ ಮುಕ್ತ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ರೋಣದಲ್ಲಿ 46 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ನರೇಗಲ್ ಮತ್ತು ಗಜೇಂದ್ರ ಗಡಕ್ಕೆ 69 ಕೋಟಿ ರೂ.ಗಳ ವೆಚ್ಚದಲ್ಲಿ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಮೂರೂ ನಗರಗಳಿಗೆ ಶುದ್ಧವಾದ ಸಂಸ್ಕರಿಸಿದ ನೀರು ಒದಗಿಸುವ ಯೋಜನೆ ಉದ್ಘಾಟಿಸಿರುವುದು ಸಂತಸ ತಂದಿದೆ ಎಂದರು. ಈ ಯೋಜನೆ 2009ರಲ್ಲಿ ಪ್ರಾರಂಭವಾದರೂ, ಮುಂದುವರೆದಿರಲಿಲ್ಲ. ಮಲಪ್ರಭ ನದಿ ನೀರನ್ನು ಶುದ್ದೀಕರಿಸಿ ಫ್ಲೋರೈಡ್ ಮುಕ್ತ ನೀರನ್ನು ಸರಬರಾಜು ಮಾಡುವ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
ಡಬಲ್ ಇಂಜಿನ್ ಸರ್ಕಾರದ ಬದ್ಧತೆ : ಮೂರು ವರ್ಷದ ಹಿಂದೆ ಕೆಂಪುಕೋಟೆಯ ಮೇಲೆ ಪ್ರತಿ ಮನೆಗೆ ಕುಡಿಯುವ ನೀರು ಕೊಡುವುದಾಗಿ ಪ್ರಧಾನಿ ಘೋಷಿಸಿದ್ದರು. ಈ ಮೂರು ವರ್ಷದಲ್ಲಿ, 12 ಕೋಟಿ ಮನೆಗಳಿಗೆ ಹೊಸದಾಗಿ ನೀರು ಕೊಟ್ಡಿದ್ದಾರೆ. ನಮ್ಮ ರಾಜ್ಯದಲ್ಲಿ 72 ವರ್ಷಗಳವರೆಗೂ ಕೇವಲ 7 ಕೋಟಿ ಮನೆಗಳಿಗೆ ನೀರಿನ ಸೌಲಭ್ಯವಿತ್ತು. ಮೂರು ವರ್ಷಗಳಲ್ಲಿ 12 ಕೋಟಿ ಮನೆಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಿದವರು ಪ್ರಧಾನಿ ನರೇಂದ್ರ ಮೋದಿ. ರಾಜ್ಯದಲ್ಲಿ ಕೇವಲ 25 ಲಕ್ಷ ಮನೆಗಳಿಗೆ 75 ವರ್ಷಗಳಲ್ಲಿ ನೀರಿನ ಸಂಪರ್ಕ ನೀಡಲಾಗಿತ್ತು. ನಮ್ಮ ಸರ್ಕಾರ ಮೂರು ವರ್ಷದಲ್ಲಿ 40 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಿದೆ. ಇದು ಡಬಲ್ ಇಂಜಿನ್ ಸರ್ಕಾರದ ಬದ್ಧತೆ. ಜಲ್ ಜೀವನ್ ಮಿಷನ್, ಅಮೃತ್ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಇದನ್ನು ಕೈಗೊಳ್ಳಲಾಗಿದೆ ಎಂದರು.
ವಿಳಂಬರಹಿತ ಪ್ರಗತಿ ಸಾಧಿಸುವುದೇ ಸರ್ಕಾರದ ಗುರಿ : ಜನ ಮೂಲ ಸೌಲಭ್ಯಗಳನ್ನು ನೀಡಲು ನಮ್ಮನ್ನು ಆಯ್ಕೆ ಮಾಡಿದ್ದಾರೆ. ಯಾವಾಗಲೂ ಜನರ ಇಚ್ಛಾಶಕ್ತಿ ಗೆದ್ದಿದೆ. ಅಭಿವೃದ್ಧಿ ನಿರಂತರವಾಗಿ ನಡೆಯುವ ಪ್ರಕ್ರಿಯೆ. ಸಮಯ ಮತ್ತು ಅಭಿವೃದ್ಧಿ ಎರಡೂ ಒಟ್ಟಿಗೆ ಸಾಗಬೇಕು. ಕಾಲಮಿತಿಯಲ್ಲೇ ಕೆಲಸಗಳು ಆಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿಳಂಬರಹಿತ ಪ್ರಗತಿ ಸಾಧಿಸುವುದೇ ನಮ್ಮ ಸರ್ಕಾರದ ಗುರಿ ಎಂದರು.
ರಾಜ್ಯದ 3 ಲಕ್ಷ ಕುಟುಂಬಗಳಿಗೆ ಬೆಳಕು ಕಾರ್ಯಕ್ರಮ: ಗದಗ ಜಿಲ್ಲೆಯಲ್ಲಿ ವಿದ್ಯುತ್ ಸೌಲಭ್ಯವಿಲ್ಲದ 8092 ಕುಟುಂಬಗಳಿಗೆ ಹಾಗೂ ಇಡೀ ರಾಜ್ಯದಲ್ಲಿ ಸುಮಾರು 3 ಲಕ್ಷ ಕುಟುಂಬಗಳಿಗೆ ಬೆಳಕು ನೀಡುವ ಕಾರ್ಯಕ್ರಮವನ್ನು ಮಾಡಲಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 10 ಸಾವಿರ ಮಹಿಳಾ ಸಂಘಗಳಿಗೆ ತಲಾ 1 ಲಕ್ಷದಂತೆ ಡಿಬಿಟಿ ಮಾಡಲಾಗಿದ್ದು, ಗ್ರಾಮದ ತಲಾ ಎರಡು ಸ್ತೀಶಕ್ತಿ ಸಂಘಗಳಿಗೆ ಒಟ್ಟು 5 ಲಕ್ಷ ರೂ. ಆರ್ಥಿಕ ನೆರವನ್ನು ನೀಡಲಾಗುತ್ತದೆ. ಎರಡನೇ ಹಂತದ ಯೋಜನೆಯನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯನ್ನೂ ಸರ್ಕಾರ ಜಾರಿಗೊಳಿಸಿದ್ದು, ಮಹಿಳೆಯರು ಹಾಗೂ ಯುವಕರ ಸ್ವಾವಲಂಬನೆ ಹಾಗೂ ಸ್ವಾಭಿಮಾನದ ಬದುಕನ್ನು ಬದುಕಬೇಕೆನ್ನುವುದು ಸರ್ಕಾರದ ಆಶಯ. ಕೃಷಿ ಕಾರ್ಮಿಕ ಮಹಿಳೆಯರಿಗೆ 1000 ರೂ. ಆರ್ಥಿಕ ಸಹಾಯ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.