ಗದಗ: ಫೆ.10 ರಂದು ಆರಂಭಗೊಳ್ಳಲಿರುವ ಐತಿಹಾಸಿಕ ಲಕ್ಕುಂಡಿ ಉತ್ಸವವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಉತ್ಸವದ ಯಶಸ್ವಿಗಾಗಿ ಎಲ್ಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಲೋಕೊಪಯೋಗಿ ಸಚಿವ ಸಿ.ಸಿ ಪಾಟೀಲ್ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳಿಂದ ಚಾಲನೆ: ಫೆ.10 ರಿಂದ 12ರ ವರೆಗೆ ಮೂರು ದಿನಗಳ ಕಾಲ ಲಕ್ಕುಂಡಿ ಉತ್ಸವ ಜರುಗಲಿದೆ. ಫೆ. 10ರಂದು ಲಕ್ಕುಂಡಿ ಸರ್ಕಾರಿ ಮಾದರಿ ಪ್ರೌಢ ಶಾಲೆಯಲ್ಲಿ ಮುಂಜಾನೆ 10 ಗಂಟೆಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ಸ್ಥಳೀಯ ಕಲಾತಂಡಗಳಿಂದ 25ಕ್ಕೂ ಹೆಚ್ಚು ಕಲಾ ಪ್ರಕಾರಗಳ ಜಾನಪದ ಕಲಾ ವಾಹಿನಿಗಳ ಮೆರವಣಿಗೆ ಮೂಲಕ ಲಕ್ಕುಂಡಿ ಉತ್ಸವ ಪ್ರಾರಂಭವಾಗುವುದು. ಅದೇ ದಿನ ಸಾಯಂಕಾಲ 6 ಗಂಟೆಗೆ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಧಾನ ವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ ಎಂದರು.
ವಿವಿಧ ಕ್ರೀಡಾ ಸ್ಪರ್ಧೆ ಆಯೋಜನೆ:ಉತ್ಸವದ ಅಂಗವಾಗಿ ಲಕ್ಕುಂಡಿಯ ಬಿ.ಹೆಚ್ ಪಾಟೀಲ ಪ್ರೌಢಶಾಲೆ ಆವರಣದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಪರ್ಧೆಗಳಿಗೆ ಬೆಳಗ್ಗೆ 10 ಗಂಟೆಗೆ ಚಾಲನೆ ದೊರೆಯಲಿದೆ. ಕುಸ್ತಿ ಸ್ಪರ್ಧೆಗೆ ಲಕ್ಕುಂಡಿಯ ಅಂತಾರಾಷ್ಟ್ರೀಯ ಕುಸ್ತಿ ಪಟು ಕು. ಪ್ರೇಮಾ ಹುಚ್ಚಣ್ಣವರ, ಕಬಡ್ಡಿ ಸ್ಪರ್ಧೆಗೆ ಅರ್ಜುನ ಪ್ರಶಸ್ತಿ ಪುರಸ್ಕೃತ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಡಾ. ಸಿ.ಹೊನ್ನಪ್ಪಗೌಡ ಚಾಲನೆ ನೀಡುವರು. ಕ್ರೀಡಾ ಸ್ಪರ್ಧೆಗಳಲ್ಲಿ ಕುಸ್ತಿ, ಕಬಡ್ಡಿ, ಮಲ್ಲಕಂಬ, ಯೋಗ, ಚಿತ್ರಕಲಾ ಸ್ಪರ್ಧೆ, ಬೋಟಿಂಗ್, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ನೀರಗ್ನಿ ಅಡಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಿರಿಧಾನ್ಯಗಳ ಮಹತ್ವ ಸಾರುವ ಸದುದ್ದೇಶದಿಂದ ಪಾರಂಪರಿಕ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಲೇಸರ್ ಶೋ :ಮಧ್ಯಾಹ್ನ 3 ಗಂಟೆಯಿಂದ ಪ್ರಧಾನ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಂಗಳವಾದ್ಯ, ತತ್ವಪದ, ನೃತ್ಯ, ದೊಡ್ಡಾಟಪದ, ಹಿಂದೂಸ್ತಾನಿ ಸಮೂಹ ನೃತ್ಯ, ಡೊಳ್ಳಿನ ಪದ, ಜನಪದ ನೃತ್ಯ, ಶಾಸ್ತ್ರೀಯ ಸಂಗೀತ, ಮಲ್ಲಕಂಬ, ದೀಪ ನೃತ್ಯ, ಯಕ್ಷಗಾನ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಅನಾವರಣಗೊಳ್ಳಲಿದೆ. ಗದಗ ಜಿಲ್ಲೆಯ ಪ್ರಮುಖವಾಗಿ ಲಕ್ಕುಂಡಿಯ ಐತಿಹಾಸಿಕ ಹಾಗೂ ಪಾರಂಪರಿಕ ಹಿನ್ನೆಲೆ ಗಮನದಲ್ಲಿರಿಸಿಕೊಂಡು ವಿಶೇಷ 'ಲೇಸರ್ ಶೋ' ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಕಿತ್ತೂರು ಚೆನ್ನಮ್ಮ ನಾಟಕ:ಬಿ.ಹೆಚ್.ಪಾಟೀಲ ಪ್ರೌಢ ಶಾಲೆಯ ಆವರಣದಲ್ಲಿ ಫೆ.10 ರಂದು ರಾತ್ರಿ 9 ಗಂಟೆಯಿಂದ ವೀರ ರಾಣಿ ಕಿತ್ತೂರು ಚೆನ್ನಮ್ಮ ನಾಟಕ ಪ್ರದರ್ಶನ ನಡೆಯಲಿದೆ. ಧಾರವಾಡದ ರಂಗಾಯಣ ತಂಡದಿಂದ ರಚಿಸಲಾದ ಈ ನಾಟಕ ರಾಣಿ ಚೆನ್ನಮ್ಮಳ ಸಾಹಸ, ಯುದ್ಧ ಕಲೆ ಹಾಗೂ ಸ್ವಾತಂತ್ರ್ಯ ಹೋರಾಟದ ವಿವಿಧ ಹಂತಗಳನ್ನು ತೆರೆದಿಡಲಿದೆ. ಬ್ರಿಟಿಷರ ಸೊಕ್ಕಡಗಿಸಿ ಸ್ವಾತಂತ್ರ್ಯದ ಕಹಳೆ ಊದುವಲ್ಲಿ ಚೆನ್ನಮ್ಮನ ಸಾಹಸ ಗಾಥೆ ಬಿಂಬಿಸುವ ನಾಟಕ ಪ್ರದರ್ಶನದಲ್ಲಿ 250ಕ್ಕೂ ಹೆಚ್ಚು ಕಲಾವಿದರು ಸಜೀವ ಆನೆ, ಕುದುರೆ, ಒಂಟೆಗಳೊಂದಿಗೆ ಜನಮನ ರಂಜಿಸಲಿದೆ.
ಗೋಷ್ಠಿಗಳು:ಐತಿಹಾಸಿಕ ಲಕ್ಕುಂಡಿ ಉತ್ಸವದಲ್ಲಿ ಪ್ರಮುಖವಾಗಿ ನಾಲ್ಕು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ಫೆ.11ರಂದು ಬೆಳಗ್ಗೆ 10 ಗಂಟೆಗೆ ಲಕ್ಕುಂಡಿಯ ಇತಿಹಾಸ ಕುರಿತು ವಿಚಾರಗೋಷ್ಠಿ ಜರುಗಲಿದೆ. ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ಧಣ್ಣವರ ಗೋಷ್ಠಿ ಉದ್ಘಾಟಿಸಿ ಆಶಯ ನುಡಿಗಳನ್ನಾಡಲಿದ್ದಾರೆ. ಡಾ. ಎಸ್ ವೈ.ಸೋಮಶೇಖರ, ಡಾ.ಅಪ್ಪಣ್ಣ ಹಂಜೆ ವಿಷಯ ಮಂಡಿಸಲಿದ್ದಾರೆ. ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ವಿ ಬಡಿಗೇರ ಕವಿಗೋಷ್ಠಿಯ ಆಶಯ ನುಡಿಗಳನ್ನಾಡುವರು.
15ಕ್ಕೂ ಅಧಿಕ ಕವಿಗಳು ಭಾಗಿ:ಹಿರಿಯ ವಿಮರ್ಶಕ ಶ್ಯಾಮಸುಂದರ ಬಿದರಕುಂದಿ ಅಧ್ಯಕ್ಷತೆ ವಹಿಸುವ ಈ ಗೋಷ್ಠಿಯಲ್ಲಿ ಜಿಲ್ಲೆಯ 15ಕ್ಕೂ ಅಧಿಕ ಕವಿಗಳು ಗೋಷ್ಠಿಯಲ್ಲಿ ಪಾಲ್ಗೊಳ್ಳುವರು. ಫೆ.12ರಂದು ಬೆಳಗ್ಗೆ.10 ಗಂಟೆಗೆ ಕೃಷಿಗೋಷ್ಠಿ ಜರುಗಲಿದ್ದು, ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ಅಶೋಕ ಆಲೂರ ಆಶಯ ನುಡಿಗಳನ್ನಾಡುವರು. ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಈಶ್ವರಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸುವರು. ಕೃಷಿ ಸಾಧಕಿ ಕವಿತಾ ಮಿಶ್ರಾ, ಪ್ರಗತಿ ಪರ ಕೃಷಿಕ ನಾಗರಾಜ ಕುಲಕರ್ಣಿ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಖ್ಯಾತ ಹೃದ್ರೋಗ ತಜ್ಞೆ ವಿಜಯಲಕ್ಷ್ಮೀ ಬಾಳೇಕುಂದ್ರಿ ಆಶಯ ನುಡಿಗಳನ್ನಾಡುವರು. ಲಕ್ಕುಂಡಿ ಗ್ರಾ.ಪಂ ಅಧ್ಯಕ್ಷೆ ಲಲಿತಾ ಅಧ್ಯಕ್ಷತೆ ವಹಿಸುವರು. ಸಂಶೋಧಕಿ ಡಾ. ಸಂಧ್ಯಾ. ವಿ ಹಾಗೂ ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಪಾಟೀಲ ಉಪನ್ಯಾಸ ನೀಡುವರು. ನಗರಸಭೆ ಅಧ್ಯಕ್ಷೆ ಉಷಾ ದಾಸರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.