ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆಯೇ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ನೀರು ಸರಬರಾಜು ಮಂಡಳಿಯ ಎಇಇ (ಸಹಾಯಕ ಕಾರ್ಯಪಾಲಕ ಅಭಿಯಂತರ) ಆಗಿರುವ ಹನುಮಪ್ಪ ಪ್ರಭಣ್ಣವರ ಎಂಬ ಅಧಿಕಾರಿಯ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಗದಗದಲ್ಲಿ ಎಇಇ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹನುಮಪ್ಪ ಬಳಿಯಿದ್ದ ಮಹತ್ವದ ದಾಖಲೆ ಪತ್ರಗಳು, ಹಣ ವಶಕ್ಕೆ ಪಡೆದಿದ್ದಾರೆ. ಬಾಗಲಕೋಟೆಯಲ್ಲಿ ಬಾಡಿಗೆ ಮನೆ ಮತ್ತು ಗದಗದಲ್ಲಿರುವ ಮನೆ ಮೇಲೆ ಏಕಕಾಲಕ್ಕೆ ಕಾರ್ಯಾಚರಣೆ ನಡೆದಿದ್ದು ಎರಡೂ ಕಡೆ ಸುಮಾರು 2 ಲಕ್ಷ ರೂ. ಹಣ ಮತ್ತು ಚಿನ್ನ, ಬೆಳ್ಳಿ ಜಪ್ತಿ ಮಾಡಲಾಗಿದೆ.
ಗದಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಇವರ ಹೆಸರಲ್ಲಿ ಲಕ್ಷಾಂತರ ರೂ. ಬೆಲೆಯ ಸುಮಾರು 11 ನಿವೇಶನಗಳಿರುವುದು ಎಸಿಬಿ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಅಧಿಕಾರಿಗಳಿಂದ ಕಡತಗಳ ಪರಿಶೀಲನೆ ಕಾರ್ಯ ಮುಂದುವರೆದಿದ್ದು ಎಇಇ ಹನುಮಪ್ಪ ಮತ್ತು ಮನೆಯವರ ವಿಚಾರಣೆ ಮುಂದುವರೆಸಿದ್ದಾರೆ.
ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ದಾಳಿಯ ನೇತೃತ್ವವಹಿಸಿದ್ದಾರೆ.