ಗದಗ :ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ಇಂದು ಮತ್ತೆ 50 ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿದ್ದು, ನದಿ ಪಾತ್ರದ ಜನರ ಎದೆಯಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.
ಮಲಪ್ರಭೆಗೆ ಮತ್ತೆ ನೀರು ರಿಲೀಸ್:
ಮಲಪ್ರಭೆಗೆ 50 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಈಗಾಗಲೇ ಜಿಲ್ಲೆಯ ನರಗುಂದ-ರೋಣ ತಾಲೂಕಿನ 13 ಗ್ರಾಮಗಳು ಮುಳುಗಡೆಯಾಗಿದ್ದು,ಮಲಪ್ರಭಾ ನದಿ, ಬೆಣ್ಣೆಹಳ್ಳಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಈ ಮಧ್ಯೆ ಮತ್ತೆ ಅಗಾಧ ಪ್ರಮಾಣದ ನೀರು ಹರಿಸುತ್ತಿರುವುದು ನದಿ ಪಾತ್ರದ ಗ್ರಾಮಗಳಲ್ಲಿ ವಾಸವಿರುವ ಜನರಲ್ಲಿ ನಡುಕ ಹುಟ್ಟಿಸಿದೆ. ಜಿಲ್ಲೆಯ ಎರಡು ಕಡೆಯಿಂದ ಪ್ರವಾಹದ ಅಟ್ಟಹಾಸ:
ನರಗುಂದ-ರೋಣ ತಾಲೂಕಿನಲ್ಲಿ ಮಲಪ್ರಭಾ, ಬೆಣ್ಣೆ ಹಳ್ಳಗಳು ತುಂಬಿ ಪ್ರವಾಹ ಉಂಟಾಗಿದ್ದು, ಮತ್ತೊಂದೆಡೆ ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ತುಂಗಭದ್ರೆ ಅಬ್ಬರಿಸುತ್ತಿದ್ದಾಳೆ. ಪರಿಣಾಮ ತುಂಗಭದ್ರಾ ನದಿಪಾತ್ರದ ಐದಕ್ಕೂ ಹೆಚ್ಚು ಗ್ರಾಮಗಳಿಗೆ ಅಪಾರ ಪ್ರಮಾಣ ನೀರು ನುಗ್ಗಿದೆ. ಹೊಳೆ ಇಟಗಿ, ಸಾಸಲವಾಡ, ಹಮ್ಮಗಿ, ವಿಠಲಾಪೂರ, ಗುಮ್ಮಗೋಳ, ಹಳೆಸಿಂಗಟಾಲೂರ ಗ್ರಾಮಗಳಿಗೆ ನುಗ್ಗಿದ ಪರಿಣಾಮ ಪ್ರವಾಹದ ಭೀತಿಯಿಂದ ಜನರು ತತ್ತರಿಸುತ್ತಿದ್ದಾರೆ.
ಪ್ರವಾಹದಲ್ಲಿ ಸಿಲುಕಿದ ಅಜ್ಜಿಯ ರಕ್ಷಣೆ:
ಇದೇ ವೇಳೆ ಮಲಪ್ರಭಾ ನದಿ, ಬೆಣ್ಣೆ ಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 80 ವರ್ಷದ ಅಜ್ಜಿಯನ್ನು ಬಚಾವ್ ಮಾಡಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದಲ್ಲಿ ನಡೆದಿದೆ.
ಪ್ರವಾಹದಲ್ಲಿ ಸಿಲುಕಿದ್ದ ಅಜ್ಜಿಯ ರಕ್ಷಣೆ ಚೆನ್ನಮ್ಮ ಪ್ರವಾಹದಲ್ಲಿ ಬದುಕುಳಿದ ವೃದ್ದೆ. ಮಲಪ್ರಭಾ ನದಿ, ಬೆಣ್ಣೆ ಹಳ್ಳಗಳಲ್ಲಿ ಪ್ರವಾಹದಲ್ಲಿ ಸುಮಾರು 26 ಗಂಟೆಗಳ ಕಾಲ ಸಿಲುಕಿದ್ದ ಈ ಅಜ್ಜಿಯನ್ನು ಪಿಎಸ್ಐ ಲಾಲ್‌ಸಾಬ್ ಜೂಲಕಟ್ಟಿ, ಪಿಡಿಓ ಮಂಜುನಾಥ್ ಗಣಿ, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಭಜಂತ್ರಿ ಸೇರಿ ರಕ್ಷಿಸಿದ್ದಾರೆ. ಸತತ 26 ಗಂಟೆಗಳ ಕಾಲ ಮನೆಯ ಮಾಳಿಗೆ ಮೇಲೆ ಕುಳಿತ ಈ ಅಜ್ಜಿ ಚುರುಮುರಿ ತಿಂದು ಹಸಿವು ನೀಗಿಸಿಕೊಂಡಿದ್ದರು ಎನ್ನಲಾಗುತ್ತಿದೆ.