ಧಾರವಾಡ:ಮಹಿಳೆಯರು ಕಾಲಿಡದ ಕ್ಷೇತ್ರವಿಲ್ಲ, ಅವರು ಕಾಲಿಟ್ಟ ಮೇಲೆ ಅಲ್ಲಿ ಒಂದು ಸಾಧನೆ ಮಾಡುವ ಹಂಬಲ ಹೊಂದಿರುತ್ತಾರೆ. ಹಲವಾರು ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಮಿಂಚುತ್ತಿದ್ದಾರೆ. ಅದಕ್ಕೆ ಕೃಷಿ ಕ್ಷೇತ್ರ ಕೂಡಾ ಹೊರತಾಗಿಲ್ಲ. ಅದರಲ್ಲೂ ಸಮಗ್ರ ಕೃಷಿ ಮಾಡಿಕೊಂಡ ಮಹಿಳೆಯೋರ್ವರು ಸ್ವತಃ ಜಮೀನಿನಲ್ಲಿ ತಾವೇ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಹೌದು, ಜಮೀನಿನಲ್ಲಿ ಕೃಷಿ ಕೆಲಸ ಮಾಡುವ ಮಹಿಳೆಯ ಹೆಸರು ಪಾರ್ವತಿ ಮಹಾದೇವ ದಂಡಿನ. ಇವರು ಮೂಲತಃ ಕೃಷಿ ಕುಟುಂಬದವರು. ಧಾರವಾಡ ತಾಲೂಕಿನ ಶಿಂಗನಹಳ್ಳಿ ಗ್ರಾಮದವರಾದ ಪಾರ್ವತಿ ಅವರಿಗೆ ಕೃಷಿ ಅಂದ್ರೆ ಅಚ್ಚುಮೆಚ್ಚು. ಪತಿಗೆ ಸಹಾಯಕಿಯಾಗಿ ಜಮೀನು ಸೇರಿಕೊಂಡಿದ್ದ ಇವರು ಇದೀಗ ಇಡೀ ಕೃಷಿಯನ್ನು ನೋಡಿಕೊಂಡು ಅದರಿಂದ ಹೆಸರು ಮಾಡಿ ಎಪಿಎಂಸಿ ಸದಸ್ಯೆ ಕೂಡಾ ಆಗಿದ್ದಾರೆ.
ಜಮೀನಿನಲ್ಲಿ ಸಲಕಿ ಗುದ್ದಲಿ ಹಿಡಿದುಕೊಂಡು ನೀರು ಹರಿಸುತ್ತಾರೆ. ಬೆನ್ನಿಗೆ ಕೀಟನಾಶಕದ ಟ್ಯಾಂಕ್ ಕಟ್ಟಿಕೊಂಡು ಬೆಳೆಗಳಿಗೆ ಕೀಟನಾಶಕ ಸಿಂಪರಣೆ ಮಾಡುತ್ತಾರೆ. ಈ ರೀತಿ ಕೃಷಿ ಮಾಡುವ ಪಾರ್ವತಿ ಸುತ್ತಮುತ್ತಲಿನ ಗ್ರಾಮದ ಜನರಿಗೆ ಮಾದರಿಯಾಗಿದ್ದಾರೆ.
ಶಿಂಗನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಪಾರ್ವತಿ ಮೊದಲ ಮೊದಲು ಸಣ್ಣಪುಟ್ಟ ಕೃಷಿ ಮಾಡಿಕೊಂಡಿದ್ದರು. ಆಮೇಲೆ ಆಮೇಲೆ ರೇಶ್ಮೆ, ಮೀನುಗಾರಿಕೆ, ಶುಂಠಿ ಬೆಳೆಗಳತ್ತ ಆಸಕ್ತಿ ತೋರಿ ಅವುಗಳನ್ನು ಬೆಳೆಯಲು ಪ್ರಾರಂಭಿಸಿದ ಬಳಿಕ ಇದೀಗ ಯಶಸ್ವಿಯಾಗಿದ್ದಾರೆ.