ಕರ್ನಾಟಕ

karnataka

ETV Bharat / state

ಕಿತ್ತೂರು ಕೋಟೆ ಪುನರ್ ನಿರ್ಮಾಣಕ್ಕೆ ಕ್ರಮ: ಮುಖ್ಯಮಂತ್ರಿ ಬೊಮ್ಮಾಯಿ - ETV Bharath Kannada news

ಧಾರವಾಡ ರಂಗಾಯಣ ನಾಟಕ ತಂಡ ಪ್ರಸ್ತುತಪಡಿಸಿದ 'ವೀರರಾಣಿ ಕಿತ್ತೂರು ಚೆನ್ನಮ್ಮ' ಮೆಗಾ ನಾಟಕ ವೀಕ್ಷಿಸಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಂತ ಪ್ರದರ್ಶನ ಆಯೋಜಿಸಿ ವೀರರಾಣಿ ಕಿತ್ತೂರು ಚನ್ನಮ್ಮಳ ಇತಿಹಾಸ ಪಸರಿಸುವಂತೆ ಎಂದು ಹೇಳಿದರು. ಇದೇ ವೇಳೆ ಕಿತ್ತೂರು ಅಭಿವೃದ್ಧಿಗೆ ನೂರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ತಿಳಿಸಿದರು.

basavaraj bommai
ಕಿತ್ತೂರು ಕೋಟೆ ಪುನರ್ ನಿರ್ಮಾಣಕ್ಕೆ ಕ್ರಮ ಎಂದ ಬಸವರಾಜ ಬೊಮ್ಮಾಯಿ

By

Published : Dec 25, 2022, 8:17 AM IST

ಧಾರವಾಡ: ಕಿತ್ತೂರು ನಾಡಿನ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ. ಇಲ್ಲಿನ ಕೋಟೆಯ ಪುನರ್ ನಿರ್ಮಾಣ ಮತ್ತು ದಾಖಲೆಗಳ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮವಹಿಸಿದೆ. ಧಾರವಾಡ ರಂಗಾಯಣವು ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕದ ಮೂಲಕ ಇತಿಹಾಸವನ್ನು ಮರುಸೃಷ್ಟಿಸುವ ಅಭಿಮಾನದ ಕೆಲಸ ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಡಿಸೆಂಬರ್​ 24 ರಂದು ಸಂಜೆ ಕೆಸಿಡಿ ಆವರಣದಲ್ಲಿ ಧಾರವಾಡ ರಂಗಾಯಣ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಮೆಗಾ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಿತ್ತೂರು ಚನ್ನಮ್ಮಳನ್ನು ನೆನೆದರೆ ರೋಮಾಂಚನವಾಗುತ್ತದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿಗಿಂತ ಮೊದಲೇ ಸ್ವಾತಂತ್ರ್ಯದ ಕಹಳೆ ಮೊಳಗಿಸಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವಳು ಆಕೆ. ಸಣ್ಣ ಸೈನ್ಯ ಕಟ್ಟಿಕೊಂಡು ಕೆಚ್ಚೆದೆಯಿಂದ ಪರಕೀಯರ ವಿರುದ್ಧ ಯುದ್ಧ ಸಾರಿದ್ದಳು. ಇಂತಹ ನಾಟಕವನ್ನು ಪರವಿನಾಯ್ಕರ್ ಅವರು ಶ್ರದ್ಧೆಯಿಂದ ರೂಪಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ರಮೇಶ ಪರವಿನಾಯ್ಕ್‌ ಅವರ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದರು.

ಕಿತ್ತೂರು ಅಭಿವೃದ್ಧಿಗೆ ರೂ.100 ಕೋಟಿ ಖರ್ಚು:ಧಾರವಾಡ ರಂಗಾಯಣ ಮೂಲಕ ಈ ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶನ ಆಯೋಜಿಸುವಂತೆ ಮಾಡಬೇಕು. ವೀರರಾಣಿ ಕಿತ್ತೂರು ಚನ್ನಮ್ಮಳ ಇತಿಹಾಸ ಎಲ್ಲೆಡೆ ಪಸರಿಸುವಂತಾಗಬೇಕು. ಕಿತ್ತೂರು ಕೋಟೆ ಪುನರ್​ ನಿರ್ಮಾಣ ಮಾಡಲು ಸರಕಾರ ತೀರ್ಮಾನಿಸಿ ಕ್ರಮ ಕೈಗೊಂಡಿದೆ. ಕಿತ್ತೂರು ಅಭಿವೃದ್ಧಿಗೆ 100 ಕೋಟಿ ರೂ ಖರ್ಚು ಮಾಡಲಾಗುತ್ತಿದೆ. ಕಿತ್ತೂರಿನ ಮತ್ತು ಚನ್ನಮ್ಮಳ ದಾಖಲೆ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮವಹಿಸಲಿದೆ ಎಂದರು.

ಮೆಗಾ ನಾಟಕಕ್ಕೆ ಅನುದಾನ ದ್ವಿಗುಣ:ಕಿತ್ತೂರು ಚನ್ನಮ್ಮ ಮೆಗಾ ನಾಟಕಕ್ಕೆ ಈಗ ಸರ್ಕಾರ ನೀಡಿರುವ ಅನುದಾನವನ್ನು ದ್ವಿಗುಣಗೊಳಿಸಿ, ಎರಡುಪಟ್ಟು ಅನುದಾನ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ಮೆಗಾ ನಾಟಕ ಪ್ರದರ್ಶನವನ್ನು ಪ್ರೋತ್ಸಾಹಿಸಲಾಗುವುದು ಎಂದು ಸಿಎಂ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಮರಾಠಿಯಲ್ಲಿ ಪ್ರದರ್ಶನವಾದ ಜನತಾರಾಜಾ ನಾಟಕದ ಮೂಲಕ ಶಿವಾಜಿ ಮಹಾರಾಜರ ಸಾಹಸಗಾಥೆಯನ್ನು ತೆರೆಗೆ ತರಲಾಗಿತ್ತು. ಅದಕ್ಕೆ ಪೂರಕವಾಗಿ ಕನ್ನಡ ನಾಡಿನ ಹೆಮ್ಮೆಯ ನಾಯಕಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಚನ್ನಮ್ಮನ ಕುರಿತು ಮೆಗಾ ನಾಟಕ ಧಾರವಾಡ ರಂಗಾಯಣದಿಂದ ರೂಪುಗೊಂಡಿದೆ ಎಂದರು.

ಕೇಂದ್ರ ಸಂಸದೀಯ ವ್ಯವಹಾರಗಳ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ನಾಟಕದ ತಯಾರಿ, ಶ್ರಮ ಮತ್ತು ನಿರ್ದೇಶಕ ರಮೇಶ ಅವರ ಸಾಹಸ ಸ್ಮರಿಸಿ, ಪ್ರೋತ್ಸಾಹಿಸಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಧಾರವಾಡ ರಂಗಾಯಣ ನಿರ್ದೇಶಕ ಹಾಗೂ ವೀರರಾಣಿ ಕಿತ್ತೂರು ಚೆನ್ನಮ್ಮ ನಾಟಕದ ಪ್ರಧಾನ ನಿರ್ದೇಶಕ ರಮೇಶ ಪರವಿನಾಯ್ಕರ ಅವರಿಗೆ ರಂಗ ಜ್ಯೋತಿ ಅಭಿದಾನ ನೀಡಿ, ಸನ್ಮಾನಿಸಿದರು.

ಇದನ್ನೂ ಓದಿ:ಕೋವಿಡ್​ ವಿಚಾರದಲ್ಲಿ ಪ್ರಧಾನಮಂತ್ರಿ ಸೂಚಿಸಿದಂತೆ ಕ್ರಮ ಕೈಗೊಳ್ಳಲಾಗಿದೆ: ಸಿಎಂ ಬೊಮ್ಮಾಯಿ

ABOUT THE AUTHOR

...view details