ಹುಬ್ಬಳ್ಳಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸುಮಾರು 10 ಕ್ಕೂ ಹೆಚ್ಚು ಸಂಘಟನೆಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದವು.
ನಗರದ ಅಂಬೇಡ್ಕರ್ ಸರ್ಕಲ್‌ನಿಂದ ತಹಶೀಲ್ದಾರ್ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಭಾರತ ಬಂದ್‌ಗೆ ರಾಜ್ಯದಲ್ಲಿ ಹೆಚ್ಚಿನ ಬೆಂಬಲ ಸಿಗದಿದ್ದರೂ ಏಷ್ಯಾದಲ್ಲೇ ಅತಿ ದೊಡ್ಡದಾದ ಹುಬ್ಬಳ್ಳಿಯ ಎಪಿಎಂಸಿಗೆ ಬಂದ್‌ನ ಬಿಸಿ ತಟ್ಟಿದೆ. ಕೂಲಿಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾದ ಪರಿಣಾಮ ಎಂಪಿಎಂಸಿ ಸಂಪೂರ್ಣ ಸ್ಥಗಿತಗೊಂಡಿದೆ.
ಹುಬಳ್ಳಿಯಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ.. ಭಾರತ್ ಬಂದ್ ಹಿನ್ನೆಲೆ ರೈತರು ತಮ್ಮ ಕೃಷಿ ಉತ್ಪನ್ನಗಳನ್ನ ಮಾರುಕಟ್ಟೆಗೆ ತಂದಿಲ್ಲ. ಅಲ್ಲದೇ ಹಮಾಲರ ಸಂಘ ನಿನ್ನಯೇ ಬಂದ್‌ಗೆ ಬೆಂಬಲ ಘೋಷಿಸಿದ ಪರಿಣಾಮ ವ್ಯಾಪಾರ ವಹಿವಾಟು ಸ್ಥಬ್ಧಗೊಂಡಿದೆ. ಎಂಪಿಎಂಸಿಯಲ್ಲಿನ ಎಲ್ಲಾ ಅಂಗಡಿ-ಮುಂಗಟ್ಟುಗಳು ಸ್ಥಗಿತವಾಗಿವೆ.
ಇದೇ ವೇಳೆ ಮಾತನಾಡಿದ ಕಾರ್ಮಿಕ ಸಂಘಟನೆ ಮುಖಂಡರಾದ ದೇವಾನಂದ ಜಗಾಪೂರಿ, ಕಾರ್ಮಿಕರ ಹಿತಾಸಕ್ತಿ ಕಾಪಾಡಬೇಕಿದ್ದ ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿ ಅವರ ಬದುಕಿನ ಜೊತೆಗೆ ಆಟವಾಡುತ್ತಿದೆ. ಕಾರ್ಮಿಕರಿಗೆ ಕನಿಷ್ಟ ಕೂಲಿ ನಿಗದಿಪಡಿಸಬೇಕು. ಬ್ಯಾಂಕ್ ಖಾಸಗೀಕರಣ ಹಾಗೂ ವಿಲೀನಗೊಳಿಸುವುದನ್ನ ಕೈಬಿಡಬೇಕು. ಅಸಂಘಟಿತ ಕಾರ್ಮಿಕರಿಗೆ ಪ್ರತಿ ತಿಂಗಳು ₹21 ಸಾವಿರ ಸಂಬಳ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಬ್ಯಾಂಕ್, ಎಲ್ಐಸಿ ನೌಕರರ ಅಸೋಸಿಯೇಷನ್, ಸಿಐಟಿಯು, ಸಿಪಿಎಂ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.