ಹುಬ್ಬಳ್ಳಿ: ಕರ ಸೇವಕರ ಬಂಧನ ಮಾಡಿರುವುದು ಸರ್ಕಾರದ ಕುಹಕ ಮತ್ತು ನೀಚತನದ ಪರಮಾವಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣವಾದರೆ ನಿಮಗೇಕೆ ಇಷ್ಟು ಹೊಟ್ಟೆ ಕಿಚ್ಚು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಮುಖಂಡರಿಗೆ ಪ್ರಶ್ನಿಸಿದರು.
ಇದೊಂದು ಕೋರ್ಟ್ ವಾರಂಟ್ ಅಂತಾ ಸುಳ್ಳು ಹೇಳ್ತಾರೆ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ದೇಶದ್ರೋಹಿಗಳ ಬಿಡುಗಡೆಗೆ ಪತ್ರ ಬರೀತಾರೆ, ಕೆಜಿ ಹಳ್ಳಿ, ಡಿಜೆ ಹಳ್ಳಿ, ಪಿಎಫ್‌ಐ ಪ್ರಕರಣ ಹಿಂಪಡೆಯೋದನ್ನು ಮಾಡ್ತಾರೆ, ಸಿಎಂ ಸಿದ್ದರಾಮಯ್ಯ ಇದನ್ನು ಐಎಸ್‌ಐಎಸ್ ಸರ್ಕಾರ ಅಂತಾ ತಿಳಿದುಕೊಂಡಿದ್ದಾರಾ? ಎಂದು ಜೋಶಿ ಕಿಡಿಕಾರಿದರು.
ಸಿದ್ದರಾಮಯ್ಯ ಅನಗತ್ಯವಾಗಿ ದ್ವೇಷ, ಅಸೂಯೆ ಹುಟ್ಟು ಹಾಕುತ್ತಿದ್ದಾರೆ. ಇದನ್ನೇ ಮುಂದುವರಿಸ್ತೀವಿ ಅನ್ನೋ ದಾರ್ಷ್ಟ್ಯ ತೋರಿಸ್ತಿದ್ದಾರೆ. ತೋರಿಸಲಿ, ನಾವು ಹಿಂದೂ ಕಾರ್ಯಕರ್ತರ ಪರ ವಾದ ಮಾಡಲು ವಕೀಲರನ್ನು ಇಟ್ಟಿದ್ದೇವೆ. ಹುಬ್ಬಳ್ಳಿಯ ಈ ಕೇಸ್ ನಮ್ಮ ಗಮನಕ್ಕೆ ಬಂದಿರಲಿಲ್ಲ, ಬಂದಿದ್ರೆ ಆಗಲೇ ಹಿಂಪಡೆಯುತ್ತಿದ್ದೆವು. ಇದರ ವಿರುದ್ಧ ನಾಳೆ ಬಿಜೆಪಿಯಿಂದ ಹೋರಾಟ ಮಾಡುತ್ತಿದ್ದೇವೆ. ರಾಮ ಮಂದಿರ ಉದ್ಘಾಟನೆ ಆಗುತ್ತಿರುವಾಗ ಕರ ಸೇವಕರನ್ನು ಅರೆಸ್ಟ್ ಮಾಡುವ ಅಗತ್ಯ ಏನಿತ್ತು? ಎಂದು ಪ್ರಶ್ನಿಸಿದ ಅವರು, ಪೊಲೀಸ್ ಅಧಿಕಾರಿಗಳು ಸನ್‌ಫ್ಲವರ್ ಇದ್ದ ಹಾಗೆ. ಸರ್ಕಾರ ಅನ್ನೋ ಸೂರ್ಯ ಎತ್ತ ಕಡೆ ತಿರಗ್ತಾನೆ, ಅತ್ತ ಕಡೆ ತಿರುಗ್ತಾರೆ ಎಂದು ಅಧಿಕಾರಿಗಳನ್ನು ಸಹ ಸಚಿವ ತರಾಟೆಗೆ ತಗೆದುಕೊಂಡರು.