ಹುಬ್ಬಳ್ಳಿ : ಅದೊಂದು ಪುಟ್ಟ ಗ್ರಾಮ, ಇಲ್ಲಿ ಈ ಹಿಂದೆ ಯಾವತ್ತೂ ಕುಡಿಯುವ ನೀರಿಗೆ ಬರ ಬಂದಿರಲಿಲ್ಲ. ಆದರೆ ಗ್ರಾಮದಲ್ಲಿ ನಡೆದ ಒಂದು ಘಟನೆ ಮತ್ತು ಅದರ ನಂತರ ಗ್ರಾಮಸ್ಥರು ತೆಗೆದುಕೊಂಡ ನಿರ್ಧಾರದಿಂದ ಇಂದು ಇಡೀ ಊರಿನ ಜನರು ನೀರಿಗಾಗಿ ಪರದಾಡುವಂತಾಗಿದೆ.
ಹೌದು, ಹುಬ್ಬಳ್ಳಿ ತಾಲೂಕಿನ ಉಮಚಗಿ ಗ್ರಾಮಸ್ಥರ ಒಂದು ತಪ್ಪು ನಿರ್ಧಾರ ಈಗ ವರ್ಷಪೂರ್ತಿ ಕೊರಗುವಂತೆ ಮಾಡಿದೆ. ಎರಡು ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ವ್ಯಯಿಸಿ ಕೆರೆ ಖಾಲಿ ಮಾಡಿಸಿದ್ದ ಅಧಿಕಾರಿಗಳಿಗೆ ಈಗ ಲಕ್ಷಾಂತರ ರೂಪಾಯಿ ವ್ಯಯಿಸಿ ಟ್ಯಾಂಕರ್ ಮೂಲಕ ನೀರು ಪೂರೈಸುವ ಅನಿವಾರ್ಯತೆ ಎದುರಾಗಿದೆ.
ಗ್ರಾಮದ ಕೆಲವರು ಮಾಡಿದ ಚಿಕ್ಕ ತಪ್ಪಿನಿಂದಾಗಿ ಇಡೀ ಗ್ರಾಮವೇ ಕಂಗಾಲಾಗಿದೆ. ಕೆರೆ ನೀರು ಖಾಲಿ ಮಾಡಿಸಿ ಪಶ್ಚಾತ್ತಾಪ ಪಡುವಂತಾಗಿದೆ. ಗ್ರಾಮದ ಕೆರೆಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರು. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಹೀಗಾಗಿ ಕೆರೆ ನೀರು ಖಾಲಿ ಮಾಡಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದರು. ನೀರು ಕಲುಷಿತಗೊಂಡಿಲ್ಲ ಅಂತ ಲ್ಯಾಬ್ ರಿಪೋರ್ಟ್ ಬಂದ್ರೂ ಗ್ರಾಮಸ್ಥರು ಪಟ್ಟು ಬಿಟ್ಟಿರಲಿಲ್ಲ. ಕೆರೆಯನ್ನು ಖಾಲಿ ಮಾಡಿಸಲಾಗಿತ್ತು. ಇದೀಗ ಕೆರೆ ನೀರು ಖಾಲಿಯಾದ ಪರಿಣಾಮ ಸಂಪೂರ್ಣ ಬತ್ತಿ ಹೋಗಿದೆ. ಮತ್ತೊಂದು ಕೆರೆಯಲ್ಲಿದ್ದ ನೀರು ತಳ ಮುಟ್ಟಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಗ್ರಾಮಸ್ಥರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.