ಕರ್ನಾಟಕ

karnataka

ETV Bharat / state

ರಾಷ್ಟ್ರಧ್ವಜ ತಯಾರಿಸುವ ದೇಶದ ಏಕೈಕ ಸಂಸ್ಥೆ... ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸಿದ್ಧವಾಗುವ ತ್ರಿವರ್ಣ ಧ್ವಜಗಳಿಗೆ ಭಾರೀ ಬೇಡಿಕೆ - ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ

ರಾಷ್ಟ್ರಧ್ವಜವನ್ನು ಉತ್ಪಾದಿಸುವ ರಾಷ್ಟ್ರದ ಏಕೈಕ ಸಂಸ್ಥೆಯಾಗಿರುವ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ ಆ. 14ರೊಳಗಾಗಿ ಸಾವಿರಾರು ಧ್ವಜಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ.‌

hubli national flag pkg
ರಾಷ್ಟ್ರಧ್ವಜಗಳಿಗೆ ಭಾರೀ ಬೇಡಿಕೆ: ಬೆಂಗೇರಿಯಲ್ಲಿ ಸಿದ್ಧವಾಗುತ್ತಿವೆ ಸಾವಿರಾರು ರಾಷ್ಟ್ರಧ್ವಜಗಳು

By

Published : Aug 7, 2023, 3:58 PM IST

Updated : Aug 8, 2023, 6:20 PM IST

ರಾಷ್ಟ್ರ ಧ್ವಜಗಳಿಗೆ ಭಾರೀ ಬೇಡಿಕೆ: ಬೆಂಗೇರಿಯಲ್ಲಿ ಸಿದ್ಧವಾಗುತ್ತಿವೆ ಸಾವಿರಾರು ತ್ರಿವರ್ಣ ಧ್ವಜಗಳು

ಹುಬ್ಬಳ್ಳಿ:ರಾಷ್ಟ್ರಧ್ವಜ ತಯಾರಿಕೆಗೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್)ಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆ ಎಂದರೆ ಅದು ಹುಬ್ಬಳ್ಳಿಯ ಬೆಂಗೇರಿಯ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ. ಕೋವಿಡ್ ನಂತರ ಮತ್ತೆ ಇಲ್ಲಿನ ರಾಷ್ಟ್ರಧ್ವಜಗಳಿಗೆ ದೇಶಾದ್ಯಂತ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆ ಸಂಸ್ಥೆಯು ಈ ವರ್ಷ ಮೂರು ಕೋಟಿ ರೂಪಾಯಿ ವಹಿವಾಟು ನಡೆಸುವ ನಿರೀಕ್ಷೆಯನ್ನು ಹೊಂದಿದೆ. ದೇಶದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಅಧಿಕೃತವಾಗಿ ರಾಷ್ಟ್ರಧ್ವಜಗಳನ್ನು ಸರಬರಾಜು ಮಾಡುವ ಹುಬ್ಬಳ್ಳಿಯ ಈ ಸಂಘ, ಪ್ರಸಕ್ತ ವರ್ಷ ಆ. 14ರೊಳಗಾಗಿ ಕೋಟ್ಯಾಂತರ ರೂ. ಮೌಲ್ಯದ ಸಾವಿರಾರು ಧ್ವಜಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ.‌

ಬೆಂಗೇರಿಯಲ್ಲಿ ಸಿದ್ಧವಾಗುತ್ತಿವೆ ಸಾವಿರಾರು ತ್ರಿವರ್ಣ ಧ್ವಜಗಳು

ಈ ಹಿಂದಿನ ದಿನಗಳಿಗೆ ಹೋಲಿಕೆ ‌ಮಾಡಿದರೆ ರಾಷ್ಟ್ರಧ್ವಜಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ವರ್ಷದಿಂದ ವರ್ಷಕ್ಕೆ ಚೇತರಿಕೆಯನ್ನು ಕಂಡಿದೆ. ಕಳೆದ 2020-21 ಕೋವಿಡ್​ನಿಂದ ವ್ಯಾಪಾರ ಕಡಿಮೆಯಾಗಿತ್ತು. ಆಗ ಕೇವಲ ಒಂದೂವರೆ ಕೋಟಿ ಮೌಲ್ಯದ ರಾಷ್ಟ್ರದ ಧ್ವಜಗಳು ಮಾತ್ರ ಮಾರಾಟವಾಗಿದ್ದವು. ಅದಾದ ಬಳಿಕ 2021-22ರಲ್ಲಿ ಕೊಂಚ ಚೇತರಿಕೆ ಕಂಡು ಎರಡೂವರೆ ಕೋಟಿಯಷ್ಟು ವಹಿವಾಟು ಆಗಿತ್ತು.‌ ಇನ್ನು 2022-23 ರಲ್ಲಿ ಹರ್ ಘರ್ ತಿರಂಗಾ ಅಭಿಯಾನದಿಂದ ರಾಷ್ಟ್ರ ಧ್ವಜಗಳಿಗೆ ಭಾರೀ ಬೇಡಿಕೆ ಬಂದಿತ್ತು. ಕಳೆದ ವರ್ಷ 4.28 ಕೋಟಿ ಮೌಲ್ಯದ ರಾಷ್ಟ್ರ ಧ್ವಜಗಳು ಮಾರಾಟವಾಗಿದ್ದವು.

ಪ್ರಸಕ್ತ ವರ್ಷ ಇಲ್ಲಿಯವರೆಗೂ ಒಂದೂವರೆ ಕೋಟಿ ಮೌಲ್ಯದ ರಾಷ್ಟ್ರಧ್ವಜಗಳು ಮಾರಾಟವಾಗಿವೆ. ಉತ್ತರ ಭಾರತದಲ್ಲಿ ರಾಷ್ಟ್ರಧ್ವಜಕ್ಕೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಅಗತ್ಯ ಪ್ರಮಾಣದ ಬೇಡಿಕೆಯನ್ನು ಪೂರೈಸಲು ರಾತ್ರಿ 8 ಗಂಟೆಯವರೆಗೂ ಕಾರ್ಮಿಕರು ಕೆಲಸ ಮಾಡಿ ರಾಷ್ಟ್ರಧ್ವಜಗಳನ್ನು ತಯಾರಿಸುತ್ತಿದ್ದಾರೆ. ಇಲ್ಲಿ ಮಹಿಳೆಯರೇ ರಾಷ್ಟ್ರಧ್ವಜವನ್ನು ತಯಾರಿಸುವುದು ವಿಶೇಷ. ರಾಷ್ಟ್ರ ಧ್ವಜಗಳನ್ನು ಸರ್ಕಾರದ ಮಾನದಂಡಗಳ ಅನುಸಾರ ಸಿದ್ಧಪಡಿಸಲಾಗುತ್ತಿದೆ.

ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ರಾಷ್ಟ್ರ ಧ್ವಜ ಮಾರಾಟದ ವಹಿವಾಟು

ದೆಹಲಿಯ ಕೆಂಪು ಕೋಟೆಯಿಂದ ಹಿಡಿದು ರಾಯಭಾರಿ‌ ಕಚೇರಿ ಸೇರಿದಂತೆ ಭಾರತದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಹಾರಾಡುವ ಧ್ವಜಗಳೆಲ್ಲವೂ ಸಿದ್ಧವಾಗುವುದು ಬೆಂಗೇರಿಯಲ್ಲಿ ಮಾತ್ರ. ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘ (ಕೆಕೆಜಿಎಸ್‌ಎಸ್)ಅನ್ನು ನ.7, 1957ರಂದು ಸ್ಥಾಪಿಸಲಾಯಿತು. ಗಾಂಧಿವಾದಿಗಳ ಗುಂಪೊಂದು ಈ ಪ್ರದೇಶದ ಖಾದಿ ಮತ್ತು ಇತರೆ ಗುಡಿ ಕೈಗಾರಿಕೆಗಳ ಬೆಳವಣಿಗೆಗೆ ಈ ಒಕ್ಕೂಟವನ್ನು ಸ್ಥಾಪಿಸಿತು.

ವೆಂಕಟೇಶ್ ಮಾಗಡಿ ಮತ್ತು ಶ್ರೀರಂಗ ಕಾಮತ ಎನ್ನುವವರು ಕ್ರಮವಾಗಿ ಮೊದಲ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು. ಕರ್ನಾಟಕದ ಸುಮಾರು 58 ಸಂಸ್ಥೆಗಳನ್ನು ಈ ಸಂಘದ ಆಶ್ರಯದಲ್ಲಿ ತರಲಾಯಿತು ಮತ್ತು ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿತು. ಇಲ್ಲಿಂದಲೇ ರಾಷ್ಟ್ರಧ್ವಜದ ಕಚ್ಚಾ ವಸ್ತುಗಳನ್ನು ತರಿಸಿಕೊಂಡು ಬಣ್ಣ, ನೇಯ್ಗೆ, ಹೊಲಿಗೆ, ಅಚ್ಚು ಹಾಕಿ ಸಿದ್ಧಪಡಿಸುವ ಕಾಯಕವನ್ನು ನಿರಂತರವಾಗಿ ಮಾಡಿಕೊಂಡು ಬರಲಾಗುತ್ತಿದೆ.

ಬೆಂಗೇರಿಯಲ್ಲಿ ಸಿದ್ಧವಾಗುತ್ತಿವೆ ಸಾವಿರಾರು ತ್ರಿವರ್ಣ ಧ್ವಜಗಳು

ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ಕಾರ್ಯದರ್ಶಿ ಶಿವಾನಂದ ಮಠಪತಿ ಮಾತನಾಡಿ, ಇಲ್ಲಿ ರಾಷ್ಟ್ರಧ್ವಜಗಳ ತಯಾರಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಮತ್ತು ಮಾರಾಟ ಆಗುತ್ತಿದೆ. ಈ ವರ್ಷ ವ್ಯಾಪಾರ ಸ್ವಲ್ಪ ಕಡಿಮೆಯಾಗಿದೆ. ಆಗಸ್ಟ್​ 15 ಮತ್ತು ಮುಂದಿನ ಜನವರಿ 26ರ ವರೆಗೆ ಎರಡುವರೆಯಿಂದ ಮೂರು ಕೋಟಿಯಷ್ಟು ವ್ಯಾಪಾರ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಉತ್ತರ ಭಾರತ ಸೇರಿದಂತೆ ಇತರೆ ರಾಜ್ಯಗಳಿಂದ ಬೇಡಿಕೆ ಇದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿದೆ ಎಂದರು.

"ರಾಷ್ಟ್ರಧ್ವಜ ಹೊಲಿಯುವುದು ಹೆಮ್ಮೆ ಮತ್ತು ಗೌರವದ ವಿಷಯ. ಕಳೆದ 20 ವರ್ಷಗಳಿಂದ ಇಲ್ಲಿ ಅಶೋಕ ಚಕ್ರದ ಪ್ರಿಂಟಿಂಗ್ ಕೆಲಸ ಮಾಡುತ್ತಿರುವೆ. ಇಲ್ಲಿ ನಮಗೆಲ್ಲರಿಗೂ ಸಂಬಳ ಕಡಿಮೆ ಇದೆ. ಆದರೂ ಕೂಡ ಎಲ್ಲರೂ ಒಗ್ಗಟ್ಟಾಗಿ ಕುಟುಂಬಸ್ಥರಂತೆ ರಾಷ್ಟ್ರಧ್ವಜದ ಕೆಲಸವನ್ನು ಮಾಡುತ್ತಿದ್ದೇವೆ. ಸಂಬಳ ಸ್ವಲ್ಪ ಕಡಿಮೆ ಇದ್ದರೂ ಬೇರೆ ಕೆಲಸಕ್ಕಿಂತ ರಾಷ್ಟ್ರ ಧ್ವಜದ ಕೆಲಸದಲ್ಲಿ ನೆಮ್ಮದಿ ಮತ್ತು ಗೌರವವಿದೆ" - ರಾಷ್ಟ್ರಧ್ವಜ ತಯಾರಿಕಾ ಸಿಬ್ಬಂದಿ ರೇಣುಕಾ

ಇದನ್ನೂ ಓದಿ:Lal Bagh: ಲಾಲ್‌ ಬಾಗ್‌ ಫಲಪುಷ್ಪ ಪ್ರದರ್ಶನ ನೋಡಲು ಜನಸ್ತೋಮ

Last Updated : Aug 8, 2023, 6:20 PM IST

ABOUT THE AUTHOR

...view details