ಹುಬ್ಬಳ್ಳಿ : ಅದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾಕಷ್ಟು ಸ್ಮಾರ್ಟ್ ಆಗಿದ್ದ ಕೆರೆ. ಆ ಕೆರೆಯಲ್ಲಿ ಈಗ ಸಾವಿರಾರು ಜಲಚರಗಳು ನಿಗೂಢವಾಗಿ ಸಾವನ್ನಪ್ಪಿವೆ. ನಗರದ ತೋಳನಕೆರೆಯಲ್ಲಿ ಸಾವಿರಾರು ಮೀನುಗಳು ನಿಗೂಢವಾಗಿ ಮೃತಪಟ್ಟಿರುವುದು ಕಂಡುಬಂದಿದೆ.
ತೋಳನಕೆರೆ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವು ಕೆರೆಯ ನೀರಿನಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮೀನುಗಳು ಸಾವಿಗೀಡಾಗಿರುವ ಶಂಕೆ ಇದೆ ಎಂದು ಹೇಳಲಾಗುತ್ತಿದೆಯಾದರೂ, ಈ ಕೆರೆಯ ನಿರ್ವಹಣೆ ಕೊರತೆಯಿಂದ ಸಾವಿರಾರು ಮತ್ಸ್ಯಗಳ ಜೀವಕ್ಕೆ ಮಾರಕವಾಗಿರಬಹುದು ಎನ್ನಲಾಗ್ತಿದೆ.
ತೋಳನಕೆರೆಗೆ ಈಗಲೂ ಗಾಂಧಿನಗರ ಹಾಗೂ ಸುತ್ತಲಿನ ಕೆಲ ಬಡಾವಣೆಗಳಿಂದ ಚರಂಡಿ ನೀರು ಹರಿದುಬರುತ್ತಿದೆ. ಈ ಚರಂಡಿ ನೀರಿನಲ್ಲಿ ವಿಷಕಾರಿ ಪದಾರ್ಥ ಅಥವಾ ಸುತ್ತಲಿನ ಪ್ರದೇಶಗಳಲ್ಲಿ ನಿರ್ಮಿಸುತ್ತಿರುವ ಮನೆ ಅಥವಾ ಇತರ ಕಟ್ಟಡಗಳ ಸಿಮೆಂಟ್, ಕಬ್ಬಿಣದ ಚೂರು ಸೇರಿ ಇತರ ಕಚ್ಚಾ ಸಾಮಗ್ರಿಗಳ ಧೂಳು ನೀರಿನಲ್ಲಿ ಸೇರಿಕೊಂಡಿದ್ದರೆ ನೀರು ವಿಷಕಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ, ಮೀನುಗಳು ಸಾವಿಗೀಡಾಗಿರಬಹುದೆಂದು ಅಂದಾಜಿಸಲಾಗಿದೆ.
ಈಗಾಗಲೇ ನೀರಿನ ಸ್ಯಾಂಪಲ್ ಅನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾಗಿ ಹು-ಧಾ ಸ್ಮಾರ್ಟ್‌ಸಿಟಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕೂಡ ಭೇಟಿ ನೀಡಿ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.