ಹುಬ್ಬಳ್ಳಿ/ಧಾರವಾಡ: ಹೊಲಕ್ಕೆ ಹೋಗಿದ್ದ ವೇಳೆ ಯುವಕನೊರ್ವ ಹಳ್ಳದಲ್ಲಿ ಸಿಲುಕಿಕೊಂಡು ಸಂಕಷ್ಟ ಎದುರಿಸುತ್ತಿರುವ ಘಟನೆ ನವಲಗುಂದ ತಾಲೂಕಿನ ಹನಸಿ ಗ್ರಾಮದಲ್ಲಿ ನಡೆದಿದೆ.
ಹನಸಿ ಗ್ರಾಮದ ನಿವಾಸಿ ಬಸವರಾಜ ಹಳ್ಳದಲ್ಲಿ ಸಿಲುಕಿಕೊಂಡಿರುವ ವ್ಯಕ್ತಿ. ಮೊದಲೇ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಶಿರಕೋಳ ಮತ್ತು ಹನಸಿ ಗ್ರಾಮದ ತುಪ್ಪದ ಹಳ್ಳವು ತುಂಬಿ ರಭಸದಿಂದ ಹರಿಯುತ್ತಿದೆ. ಈ ಸಂದರ್ಭದಲ್ಲಿ ಹೊಲಕ್ಕೆ ಹೋದಾಗ ಅಚಾನಕ ಆಗಿ ಯುವಕ ಹಳ್ಳದಲ್ಲಿ ಸಿಲುಕಿಕೊಂಡಿದ್ದು, ಆತನನ್ನು ರಕ್ಷಿಸಲು ಸ್ಥಳೀಯರು ಹರ ಸಾಹಸ ಮಾಡುತ್ತಿದ್ದಾರೆ.
ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್..!
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ನಗರದ ವಿವಿಧ ಪ್ರದೇಶಗಳಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್(ಧೂಮೀಕರಣ) ಮಾಡಲಾಯಿತು. ಅವಳಿ ನಗರದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಇದರ ಜೊತೆಗೆ ಸಾಂಕ್ರಾಮಿಕ ರೋಗಗಳ ಹಾವಳಿ ಕೂಡಾ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗಾಮನಗಟ್ಟಿ, ಶಾಂತಿನಿಕೇತನ ಕಾಲೊನಿ, ಲಿಂಗರಾಜ ನಗರ, ವಿದ್ಯಾನಗರ, ರೇಣುಕಾ ನಗರ, ಗಾಂಧಿವಾಡ ಸ್ಲಂ ಹಾಗೂ ಸಿದ್ದಾರ್ಥ ಕಾಲೋನಿಯಲ್ಲಿ ಫಾಗಿಂಗ್ ಮಾಡಲಾಗಿದೆ.
ಜಿಲ್ಲೆಯಲ್ಲಿ ಶುರುವಾಯ್ತು ಮೂರು ಪುನರ್ವಸತಿ ಕೇಂದ್ರಗಳು:
ಧಾರವಾಡ ನಗರದ ಗೌಡರ ಕಾಲೊನಿ ಹಾಗೂ ಭಾವಿಕಟ್ಟಿ ಪ್ಲಾಟ್ ಪ್ರದೇಶದಲ್ಲಿ ಒಂದು ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ನವಲಗುಂದ ತಾಲೂಕಿನ ಆರೇಕುರಹಟ್ಟಿ ಹಾಗೂ ಅಳ್ನಾವರ ಪಟ್ಟಣದ ಉಮಾ ಭವನದಲ್ಲಿ ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ. ಅಗತ್ಯವಿರುವೆಡೆ ಇನ್ನೂ ಹೆಚ್ಚಿನ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಪರಿಹಾರ ಕಾರ್ಯಕ್ಕೆ ನೋಡಲ್ ಅಧಿಕಾರಿಗಳ ನೇಮಕ :
ಸತತವಾಗಿ ಒಂದು ವಾರದಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಉಂಟಾಗುತ್ತಿರುವ ಹಾನಿಯ ಪರಿಹಾರ ಕಾರ್ಯಾಚರಣೆಗೆ ಪ್ರತಿ ತಾಲೂಕಿಗೆ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.