ಹುಬ್ಬಳ್ಳಿ: ಈಗಿನ ಕಾಲದ ಯುವ ಪೀಳಿಗೆ ಪಾಶ್ಚಿಮಾತ್ಯ ಸಂಗೀತಕ್ಕೆ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಇದರ ನಡುವೆ ಶಾಸ್ತ್ರೀಯ ಸಂಗೀತದ ಕಲೆ ನಶಿಸುತ್ತಿದೆ. ಇಂತಹ ಸಮಯದಲ್ಲಿ ಇಲ್ಲೊಂದು ಕುಟುಂಬ ಶಾಸ್ತ್ರೀಯ ಸಂಗೀತ ಕಲೆಯನ್ನೇ ಉಸಿರಾಗಿಸಿಕೊಂಡು, ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದೆ.
ಹುಬ್ಬಳ್ಳಿಯ ದೇಶಪಾಂಡೆ ನಗರದ ನಿವಾಸಿಗಳಾದ ಆನಂದ ದೇಸಾಯಿ ಹಾಗೂ ಅವರ ಮಗ ಅರುಣ ದೇಸಾಯಿ, ಶಾಸ್ತ್ರೀಯ ಸಂಗೀತವನ್ನೇ ಉಸಿರಾಗಿಸಿಕೊಂಡು ಕಲೆಯನ್ನು ಇತರರಿಗೆ ಉಣಬಡಿಸುತ್ತಿದ್ದಾರೆ. ತಮ್ಮ ನಿವಾಸದಲ್ಲೇ ಸಂಗೀತ ಶಾಲೆ ಆರಂಭ ಮಾಡಿ ಅನೇಕ ಪ್ರತಿಭೆಗಳಿಗೆ ದಾರಿ ದೀಪವಾಗಿದ್ದಾರೆ. ದೇಸಾಯಿ ಕುಟುಂಬದವರು ತಮ್ಮ ಪುರಾತನ ಕಾಲದಿಂದಲೂ ಸಂಗೀತ ಕಲೆಯಲ್ಲಿ ತೊಡಗಿದ್ದು, ಆ ಕಲೆಯನ್ನೇ ಮುಂದುವರೆಸುತ್ತಿರುವುದು ವಿಶೇಷವಾಗಿದೆ.
ಶಾಸ್ತ್ರೀಯ ಸಂಗೀತವನ್ನು ಬೆಳೆಸುತ್ತಿರುವ ದೇಸಾಯಿ ಕುಟುಂಬ ದೇಸಾಯಿ ಕುಟುಂಬದವರು ಕಳೆದ 35 ವರ್ಷಗಳಿಂದ ಸಾವಿರಾರು ಮಕ್ಕಳಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಲಘು ಶಾಸ್ತ್ರೀಯ ಸಂಗೀತ, ಕಲಿಸುವುದರ ಮೂಲಕ ಪಾರಂಪರಿಕ ಸಂಗೀತ ಉಳಿಸುವ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೇ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಹು-ಧಾ ನಾಗರಿಕ ಪ್ರಶಸ್ತಿ, ಗಂಗೂಬಾಯಿ ಹಾನಗಲ್ ಅಕಾಡೆಮಿ, ಶ್ಯಾಂಡಲ್ ಆಶ್ರಮ, ಮಯೂರ ನೃತ್ಯ ಅಕ್ಯಾಡೆಮಿ ಪ್ರಶಸ್ತಿಗಳನ್ನು ಇವರು ಮುಡಿಗೇರಿಸಿಕೊಂಡಿದ್ದಾರೆ.
ಅರುಣ ದೇಸಾಯಿ ಅವರು ಹುಬ್ಬಳ್ಳಿಯ ಪ್ರತಿಷ್ಠಿತ ಗಂಗೂಬಾಯಿ ಹಾನಗಲ್ ಗುರುಕುಲದಲ್ಲಿ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಇವರು 2019 ರಲ್ಲಿ ಭಾರತೀಯ ವಿಧ್ಯಾಭವನದ ಆಹ್ವಾನದ ಮೇರೆಗೆ, ಯುಕೆ ಲಂಡನ್ನಲ್ಲಿ ಕಾರ್ಯಕ್ರಮವನ್ನು ನೀಡಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಧೀಮಂತ ನಾಯಕ, ಗಾನಗಂಗಾ, ಗಂಗೂಬಾಯಿ ಹಾನಗಲ್ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ದೇಸಾಯಿ ಕುಟುಂಬ ಹಿಂದೂಸ್ತಾನಿ ಸಂಗೀತ ಸಂಸ್ಕೃತಿಯನ್ನು ಉಳಿಸುವ ಕಾರ್ಯದ ನಡುವೆ ಅದೆಷ್ಟೋ ಮಕ್ಕಳಿಗೆ ಕಲಿಕೆಯ ಗುರುಗಳಾಗಿರುವುದು ಎಲ್ಲರಿಗೂ ಸಂತಸ ತರುವ ವಿಚಾರ.