ಧಾರವಾಡ: ಭಾರತದ ರಾಷ್ಟ್ರಪತಿ ನರೇಂದ್ರ ಮೋದಿ ಹಾಗೂ ಪ್ರಧಾನ ಮಂತ್ರಿಯೂ ಕೂಡ ನರೇಂದ್ರ ಮೋದಿಯೇ. ಇದು ಶಿಕ್ಷಣ ಸಚಿವರಿಗೆ ಮಕ್ಕಳಿಂದ ಬಂದ ಉತ್ತರಗಳು.
ತಾಲೂಕಿನ ಬಾಡ ಗ್ರಾಮದಲ್ಲಿನ ವಿದ್ಯಾಗಮ ಕೇಂದ್ರಕ್ಕೆ ಭೇಟಿ ನೀಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು, ಮಕ್ಕಳಿಗೆ ಪ್ರಶ್ನೆ ಕೇಳಿದಾಗ ಮಕ್ಕಳು ಈ ರೀತಿ ಉತ್ತರ ನೀಡಿದ್ದಾರೆ. ಖುದ್ದು ಮಕ್ಕಳ ಪ್ರಶ್ನೆಯಿಂದ ಸಚಿವರು ಅವಕ್ಕಾಗಿದ್ದಾರೆ.
ಮಕ್ಕಳ ಉತ್ತರದಿಂದ ಅವಕ್ಕಾದ ಶಿಕ್ಷಣ ಸಚಿವರು ಐದು ಮತ್ತು ಆರನೇ ತರಗತಿಯ ಮಕ್ಕಳಿಗೆ ಸಾಮಾನ್ಯ ಪ್ರಶ್ನೆಗಳನ್ನು ಕೇಳಿದಾಗ, ಅವರಿಂದ ಬಂದ ಉತ್ತರಗಳನ್ನು ಕೇಳಿದ ಸಚಿವರು ಖುದ್ದು ತಾವೇ ಮಕ್ಕಳಿಗೆ ಉತ್ತರ ಹೇಳಿದರು.
ಆರಂಭದಲ್ಲಿ ಸಚಿವರು ಭಾರತದ ರಾಷ್ಟ್ರಪತಿ ಯಾರು ಎಂದು ಪ್ರಶ್ನೆ ಕೇಳಿದಾಗ, ಯಾವೊಬ್ಬ ಮಗುವಿನಿಂದ ಉತ್ತರ ಬರಲಿಲ್ಲ. ಒಬ್ಬ ವಿದ್ಯಾರ್ಥಿ ಮಾತ್ರ ಕೈ ಮೇಲೆ ಎತ್ತಿ, ನರೇಂದ್ರ ಮೋದಿ ಎಂದು ಉತ್ತರ ನೀಡಿದ. ಬಳಿಕ ಪ್ರಧಾನಿ ಯಾರು ಎಂದು ಪ್ರಶ್ನಿಸಿದಾಗ ಮತ್ತೆ ಆ ವಿದ್ಯಾರ್ಥಿ ನರೇಂದ್ರ ಮೋದಿ ಎಂದು ಉತ್ತರಿಸಿದ್ದಾನೆ. ಪ್ರಧಾನಿಯೂ ಅವರೇ, ರಾಷ್ಟ್ರಪತಿನೂ ಅವರೇನಾ ಅಂತಾ ಕೇಳಿದ ಸಚಿವರು, ಬಳಿಕ ತಾವೇ ಪ್ರಮುಖ ಸ್ಥಾನಗಳಲ್ಲಿರುವ ಹೆಸರುಗಳನ್ನು ಮಕ್ಕಳಿಗೆ ತಿಳಿಸಿದರು.