ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಆರೋಗ್ಯ ಕೇಂದ್ರದಲ್ಲಿ ಪ್ರತಿ ತಾಯಿ ಮಗುವಿಗೆ ಜನ್ಮ ನೀಡಿದಾಗಲೂ ಇಲ್ಲಿನ ಆಯಾ ಗಿಡ ನೆಡುತ್ತಾರೆ. ಹೀಗಾಗಿ ವರ್ಷಗಳಿಂದ ಇವರ ಈ ಸೇವೆಯಿಂದ ಆಸ್ಪತ್ರೆಯ ಆವರಣದಲ್ಲಿ ದೊಡ್ಡ ಸಸ್ಯಕಾಶಿಯೇ ನಿರ್ಮಾಣವಾಗಿದೆ.
42 ವರ್ಷದ ಆಯಾ ಮಹಾದೇವಿ ನಾಯ್ಕರ್, ಕೇವಲ 1,000 ರೂಪಾಯಿಗೆ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿ ಆಯಾ ಆಗಿ ಕೆಲಸ ಮಾಡುತ್ತಾರೆ. ಇವರು ಸೂಲಗಿತ್ತಿಯಾಗಿ ಕಲಘಟಗಿ ತಾಲೂಕಿನಲ್ಲೇ ಹೆಸರಾಗಿದ್ದು, ಇದುವರೆಗೆ ಆರೋಗ್ಯ ಕೇಂದ್ರದ ಹೆರಿಗೆಯ ಡಾಕ್ಟರ್ ಜೊತೆಗೆ 2,000 ಕ್ಕೂ ಅಧಿಕ ಹೆರಿಗೆಯ ಕಾರ್ಯಕ್ಕೆ ನೆರವಾಗಿ ಸೈ ಎನಿಸಿಕೊಂಡಿದ್ದಾರೆ.
ಆಯಾ ಕೆಲಸದ ಜೊತೆಗೆ ಕಲಘಟಗಿಯ ಮಹಾದೇವಿ ನಾಯ್ಕರ್ ಪರಿಸರ ಪ್ರೇಮ ಎಲ್ಲರಿಗೂ ಮಾದರಿ ಕಳೆದ ಜೂನ್ ತಿಂಗಳಲ್ಲಿ 150 ಸಸಿಗಳನ್ನು ಆರೋಗ್ಯ ಕೇಂದ್ರದ ಆವರಣದಲ್ಲಿ ಬೆಳೆಸಿದ್ದು ಅದರಲ್ಲಿ 120 ಸಸಿಗಳು ಫಲಕ್ಕೆ ಸಿದ್ಧವಾಗಿವೆ. ಕಾಡುನೆಲ್ಲಿ, ಪೇರಲೆ, ಬೇವು, ಕರಿಬೇವು, ಶ್ರೀಗಂಧ, ಅಶ್ವಗಂಧದಂತಹ ಗಿಡ ಮೂಲಿಕೆಗಳಿಗೆ ಒತ್ತು ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಹೆರಿಗೆಯಾದ ನಂತರದಲ್ಲಿ ಜನರು ಆಯಾ ಮಹಾದೇವಿಗೆ ಹಣ ನೀಡುತ್ತಾರೆ. ಆದ್ರೆ ಹಣದ ಬದಲಾಗಿ ನನಗೊಂದು ಗಿಡ ತಂದು ಕೊಡಿ ಎಂದು ಹೇಳಿ ಗಿಡ ತರಸಿ ಮಗು ಪಾಲಕರ ಜೊತೆ ಸೇರಿ ಗಿಡ ನೇಡುತ್ತಾ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.
ಕಲಘಟಗಿ ತಾಲೂಕಿನ ಹಳ್ಳಿಗಳಲ್ಲಿ ಹೆರಿಗೆ ತುರ್ತು ಪರಿಸ್ಥಿತಿ ಒದಗಿದಲ್ಲಿ ಜನ ತಡರಾತ್ರಿಯಲ್ಲಿ ಆಸ್ಪತ್ರೆ ಬಾಗಿಲ ಬದಲಾಗಿ ಮಹಾದೇವಿ ನಾಯ್ಕರ ಬಾಗಿಲಿಗೆ ಬರುತ್ತಾರೆ. ಹೆರಿಗೆ ಮಾಡಿಸುವಲ್ಲಿ ಅಷ್ಟರ ಮಟ್ಟಿಗೆ ಈ ಮಹಾತಾಯಿ ನಿಪುಣತೆ ಹೊಂದಿದ್ದಾರೆ.